ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ? – Kannada News | Which Central Government scheme is best for installing a solar Panel at your home? How to apply?

ನವದೆಹಲಿ, ಜುಲೈ 4: ಭಾರತದಲ್ಲಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು (Solar Panels) ಅಳವಡಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯೆಂದರೆ “ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ” (PM Surya Ghar: Muft Bijli Yojana). ಪರಿಸರ ಸ್ನೇಹಿ ಜೀವನ ಮತ್ತು ವಿದ್ಯುತ್ ಉಳಿತಾಯಕ್ಕೆ ನಿಮ್ಮ ಮನೆಗೆ ಸೋಲಾರ್ ಫಲಕಗಳನ್ನು ಹಾಕಿಸಲು ನೀವು ಯೋಚಿಸುತ್ತಿದ್ದರೆ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ವಿವರಗಳು ಇಲ್ಲಿವೆ…

ಈ ಯೋಜನೆಯ ಪ್ರಮುಖ ಉದ್ದೇಶಗಳು:

– ದೇಶದ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು.

– ಮನೆಗಳ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಪರಿಸರಸ್ನೇಹಿ ಇಂಧನ ಬಳಕೆಯನ್ನು ಹೆಚ್ಚಿಸುವುದು.

– ಸಾರ್ವಜನಿಕರ ವಿದ್ಯುತ್ ಬಿಲ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದು.

ಕೇಂದ್ರ ಸರ್ಕಾರದಿಂದ ಸಿಗುವ ಸಬ್ಸಿಡಿಯ ವಿವರಗಳು:

ಪಿಎಂ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಸಿಸ್ಟಮ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗೆ ಭಾರಿ ಸಬ್ಸಿಡಿಯನ್ನು ನೀಡುತ್ತದೆ. ಸಾಮಾನ್ಯ ಮಧ್ಯಮ ವರ್ಗದ ಮನೆಗಳಿಗೆ 2ರಿಂದ 3 ಕಿಲೋವ್ಯಾಟ್ ಸೋಲಾರ್ ಸಿಸ್ಟಮ್ ಸಾಕಾಗುತ್ತದೆ.

1 ಕಿಲೋವ್ಯಾಟ್ ಸಾಮರ್ಥ್ಯಕ್ಕೆ: 30,000 ರೂ. ಸಬ್ಸಿಡಿ ಸಿಗುತ್ತದೆ.

2 ಕಿಲೋವ್ಯಾಟ್ ಸಾಮರ್ಥ್ಯಕ್ಕೆ: 60,000 ರೂ. ಸಬ್ಸಿಡಿ ಸಿಗುತ್ತದೆ.

3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ಕಿಲೋವ್ಯಾಟ್​ ಸಾಮರ್ಥ್ಯಕ್ಕೆ: ಗರಿಷ್ಠ 78,000ರವರೆಗೆ ಸಬ್ಸಿಡಿ ದೊರೆಯುತ್ತದೆ.

ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:

– ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.

– ಸ್ವಂತ ಮನೆ ಮತ್ತು ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ, ನೆರಳು ಬೀಳದ ಟೆರೇಸ್ ಹೊಂದಿರಬೇಕು.

– ಮನೆಗೆ ಸೂಕ್ತವಾದ ವಿದ್ಯುತ್ ಸಂಪರ್ಕ ಇರಬೇಕು.

– ಈ ಹಿಂದೆ ಯಾವುದೇ ಸೌರ ಫಲಕ ಯೋಜನೆಯಡಿ ಸರ್ಕಾರದಿಂದ ಸಬ್ಸಿಡಿ ಪಡೆದಿರಬಾರದು.

ಈ ಯೋಜನೆಯಿಂದ ಗ್ರಾಹಕರಿಗೆ ಆಗುವ ಲಾಭಗಳು:

ಉಚಿತ ವಿದ್ಯುತ್: ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುವುದರಿಂದ ವಿದ್ಯುತ್ ಬಿಲ್ ಸಂಪೂರ್ಣ ಉಳಿತಾಯವಾಗುತ್ತದೆ.

ಹೆಚ್ಚುವರಿ ಆದಾಯ: ನಿಮ್ಮ ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ನೀವು ಸರ್ಕಾರದ ಗ್ರಿಡ್‌ಗೆ (Bescom, Mescom ಇತ್ಯಾದಿ) ಮಾರಾಟ ಮಾಡಿ ಹಣ ಗಳಿಸಬಹುದು.

ಕಡಿಮೆ ಬಡ್ಡಿದರದಲ್ಲಿ ಸಾಲ: ಸೋಲಾರ್ ಖರೀದಿಸಲು ಹಣದ ಕೊರತೆ ಇದ್ದರೆ ಬ್ಯಾಂಕ್‌ಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಅಡಮಾನ ರಹಿತ ಸಾಲ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್​​ಟಾಪ್ ಸೋಲಾರ್ ಸ್ಕೀಮ್

ಅರ್ಜಿ ಸಲ್ಲಿಸುವುದು ಹೇಗೆ?:

ಈ ಯೋಜನೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟು…

– ಅಧಿಕೃತ ವೆಬ್‌ಸೈಟ್‌ pmsuryaghar.gov.in ಪೋರ್ಟಲ್‌ಗೆ ಭೇಟಿ ನೀಡಿ.

– ನಿಮ್ಮ ರಾಜ್ಯ, ವಿದ್ಯುತ್ ಸರಬರಾಜು ಕಂಪನಿ (ಉದಾಹರಣೆಗೆ: BESCOM/ HESCOM/ MESCOM), ಗ್ರಾಹಕ ಖಾತೆ ಸಂಖ್ಯೆ (ನಿಮ್ಮ ಕರೆಂಟ್​ ಬಿಲ್​ನಲ್ಲಿರುತ್ತದೆ) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿಕೊಳ್ಳಿ.

– ಲಾಗಿನ್ ಆದ ನಂತರ ‘Rooftop Solar’ಗಾಗಿ ಅರ್ಜಿ ಸಲ್ಲಿಸಿ.

– ನಿಮ್ಮ ಸ್ಥಳೀಯ DISCOM ಪರಿಶೀಲಿಸುವವರೆಗೆ ಮತ್ತು ಕಾರ್ಯಸಾಧ್ಯತಾ ಅನುಮೋದನೆ ನೀಡುವವರೆಗೆ ಕಾಯಿರಿ.

– ನಿಮ್ಮ ಸ್ಥಳೀಯ ವಿದ್ಯುತ್ ಕಂಪನಿಯಿಂದ ಅನುಮೋದನೆ ಸಿಕ್ಕ ನಂತರ, ನೋಂದಾಯಿತ ವೆಂಡರ್‌ಗಳ (Registered Vendors) ಮೂಲಕ ನಿಮ್ಮ ಮನೆಯ ಮೇಲೆ ಸೋಲಾರ್ ಅಳವಡಿಸಿ.

– ಸೋಲಾರ್ ಅಳವಡಿಕೆ ಪೂರ್ಣಗೊಂಡ ನಂತರ ನೆಟ್ ಮೀಟರ್ (Net Meter) ಅಳವಡಿಕೆಗೆ ಅರ್ಜಿ ಸಲ್ಲಿಸಿ.

– ಸಬ್ಸಿಡಿ ಪಡೆಯಲು ಪಿಎಂ ಸೂರ್ಯ ಘರ್ ಯೋಜನೆಯ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ರದ್ದಾದ ಚೆಕ್‌ನ ಸ್ಕ್ಯಾನ್ ಮಾಡಿದ ಪ್ರತಿಯೊಂದಿಗೆ ಸಲ್ಲಿಸಿ.

– ಅಪ್ರೂವ್ ಆದ 30 ದಿನದೊಳಗೆ ಸರ್ಕಾರದ ಸಬ್ಸಿಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *