ಮನೆಯಲ್ಲಿ ಕಳ್ಳತನ ನಡೆದಿರುವುದುImage Credit source: Tv9 Kannada
ದೇವನಹಳ್ಳಿ, ಆಗಸ್ಟ್ 10: 2 ತಿಂಗಳಿಂದ ಮನೆ ಮಂದಿಯಂತ್ತಿದ್ದ ಕೆಲಸದವರೇ ಮಾಲೀಕ ಊರಿಗೆ ಹೋಗ್ತಿದ್ದಂತೆ ಮನೆಯನ್ನೆ ಗುಡಿಸಿ ಗುಂಡಾಂತರ ಮಾಡಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲ ಎಂಬ ಮಾಹಿತಿ ಗೊತ್ತಿದ್ದ ಹಿನ್ನೆಲೆ ಮಧ್ಯರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೊಸಕೋಟೆ ಹೊರವಲಯದ ಹೆದ್ದಾರಿ ಬದಿಯ 40 ಎಕರೆ ಪ್ರದೇಶದಲ್ಲಿರುವ ಪಾಲಮ್ ವಿಲ್ಲಾ ಬಡಾವಣೆಯಲ್ಲಿ ಕುಟುಂಬ ಸಮೇತ ಹಲವು ವರ್ಷಗಳಿಂದ ವಾಸವಿದ್ದ ರವಿ ರಾಜನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇತ್ತೀಚೆಗೆ ಬಡಾವಣೆಗೆ ಬಂದಿದ್ದ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಒಬ್ಬ ಪತ್ನಿಗೆ ಮನೆಯಲ್ಲಿ ಕೆಲಸವಿದ್ದರೆ ಕೊಡಿ. ನಿತ್ಯ ಕಾರುಗಳನ್ನ ತೊಳೆದು ಮನೆ ಕ್ಲೀನ್ ಮಾಡಿಕೊಡ್ತಾರೆ ಎಂದು ಕೇಳಿಕೊಂಡಿದ್ದ. ಆತನ ಮಾತು ಕೇಳಿ ರವಿ ರಾಜನ್ ಕೂಡ ಕೆಲಸ ನೀಡಿದ್ದರು. ಈ ನಡುವೆ ನಾವು ಊರಿಗೆ ಹೋಗಿಬರುತ್ತೇಬೆ. ಮನೆಕಡೆ ಹುಷಾರು ಎಂದು ಹೇಳಿ ಕುಟುಂಬ ತೆರಳಿತ್ತು. ಇದೇ ಸರಿಯಾದ ಸಮಯ ಎಂದು ಅಲರ್ಟ್ ಆದ ಆರೋಪಿಗಳು, ಮಧ್ಯರಾತ್ರಿ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಕಿ ಬಿಗ್ ಬೇಟೆ: 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಸೆರೆ!
ಕುಟುಂಬಸ್ಥರಿಗೆ ಕಾದಿತ್ತು ಆಘಾತ
ಊರಿಂದ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಕುಟುಂಬಸ್ಥರಿಗೆ ಬಡಾವಣೆಯ ನೆರೆ ಹೊರೆಯವರು ಸೆಕ್ಯೂರಿಟಿ ಗಾರ್ಡ್ ಒಬ್ಬ ನಾಪತ್ತೆಯಾಗಿದ್ದು ಮನೆಯಲ್ಲಿ ಒಮ್ಮೆ ಚೆಕ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗೆ ಮನೆ ಒಳಗಡೆ ಹೋಗಿ ನೋಡಿದಾಗ ಬಾಗಿಲು ಒಡೆದು ಕಳ್ಳರು ಕಳ್ಳತನ ಮಾಡಿರುವ ದೃಶ್ಯ ಕಂಡು ಬಂದಿದೆ. ಜೊತೆಗೆ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಮನೆ ಒಳಗಡೆ ರಾಡ್ ಹಿಡಿದು ನುಗ್ಗಿ ಒಡಾಡಿ ಕಳ್ಳತನ ಮಾಡಿರುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಇದರ ಆಧಾರದಲ್ಲಿ ಕುಟುಂಬಸ್ಥರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
