ನೋಯ್ಡಾ, ಏಪ್ರಿಲ್ 19: ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ಭೀಕರ ಹಿಂಸಾಚಾರ(Violence) ಮತ್ತು ಬೆಂಕಿ ಹಚ್ಚುವಿಕೆ ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF), ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆಯ ಪ್ರಮುಖ ಆರೋಪಿಯನ್ನು ಹೆಡೆಮುರಿ ಕಟ್ಟಿದೆ. ಹಿಂಸಾಚಾರದ ನಂತರ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಆದಿತ್ಯ ಆನಂದ್ ಎಂಬಾತ ನೋಯ್ಡಾದಿಂದ ಚೆನ್ನೈಗೆ, ಅಲ್ಲಿಂದ ತಿರುಚ್ಚಿಗೆ ಪಲಾಯನ ಮಾಡಿದ್ದ. ಈತನ ಚಲನವಲನದ ಬಗ್ಗೆ ನಿಖರ ಮಾಹಿತಿ ಪಡೆದ STF ನೋಯ್ಡಾ ಘಟಕದ ತಂಡವು ತಮಿಳುನಾಡಿಗೆ ಹೋಗಿ ಆತನನ್ನು ಬಂಧಿಸಿದೆ.
ಏಪ್ರಿಲ್ 18 ರಂದು ಬೆಳಗಿನ ಜಾವ 1.40 ಗಂಟೆಗೆ, ತಿರುಚ್ಚಿ ರೈಲು ನಿಲ್ದಾಣದಲ್ಲಿ ಆದಿತ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗೌತಮ್ ಬುದ್ಧ ನಗರದ ನ್ಯಾಯಾಲಯ ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಕೇವಲ ಎರಡು ದಿನಗಳಲ್ಲೇ ಈ ಕಾರ್ಯಾಚರಣೆ ನಡೆದಿದೆ.
ಆರೋಪಿ ಆದಿತ್ಯ ಆನಂದ್ ಹಿನ್ನೆಲೆ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಈತ ಬಿಹಾರದ ವೈಶಾಲಿಯವನಾಗಿದ್ದು, ಜಮ್‌ಶೆಡ್‌ಪುರದಲ್ಲಿ ಬಿ.ಟೆಕ್ ಮುಗಿಸಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಗುರುಗ್ರಾಮದಲ್ಲಿದ್ದ ಈತ ನಂತರ ನೋಯ್ಡಾಗೆ ಶಿಫ್ಟ್ ಆಗಿದ್ದ. ಇಂತಹ ಉನ್ನತ ಶಿಕ್ಷಣ ಪಡೆದ ವ್ಯಕ್ತಿಯೊಬ್ಬ ಇಷ್ಟೊಂದು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸ್ಕೆಚ್ ಹಾಕಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮತ್ತಷ್ಟು ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!
ತನಿಖೆಯ ವೇಳೆ ಬಯಲಾದ ಮಾಹಿತಿ ಪ್ರಕಾರ, ಮಾರ್ಚ್ 30 ಮತ್ತು ಏಪ್ರಿಲ್ 1 ರ ನಡುವೆ ನೋಯ್ಡಾದಲ್ಲಿ ಕೆಲವು ಸಂಘಟನೆಗಳ ಸದಸ್ಯರೊಂದಿಗೆ ರಹಸ್ಯ ಸಭೆಗಳು ನಡೆದಿದ್ದವು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವ ಸೋಗಿನಲ್ಲಿ, ನೋಯ್ಡಾದಲ್ಲಿ ಬೃಹತ್ ಪ್ರಮಾಣದ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವ ಸಂಚು ರೂಪಿಸಲಾಗಿತ್ತು. ಇದರ ಫಲವಾಗಿಯೇ ಏಪ್ರಿಲ್ 13 ರಂದು ನೋಯ್ಡಾ ಬೀದಿಗಳಲ್ಲಿ ಹಿಂಸಾಚಾರ ನಡೆದಿತ್ತು.
ಬಂಧಿತ ಆದಿತ್ಯನನ್ನು ತಮಿಳುನಾಡಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವ STF, ಆತನನ್ನು ಸಾರಿಗೆ ಬಂಧನಕ್ಕೆ (Transit Remand) ಒಳಪಡಿಸಿದೆ. ಆತನನ್ನು ನೋಯ್ಡಾಗೆ ಕರೆತಂದ ನಂತರ ಜೈಲಿಗೆ ಕಳುಹಿಸಲಾಗುತ್ತದೆ. ಆದಿತ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಈ ಜಾಲದ ಉಳಿದ ಕೊಂಡಿಗಳ ಪತ್ತೆಗೆ ಮುಂದಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ವಿಧ್ವಂಸಕ ಮನಸ್ಥಿತಿ ಹೊಂದಿದ್ದ ಆದಿತ್ಯನ ಬಂಧನವು ನೋಯ್ಡಾ ಹಿಂಸಾಚಾರದ ಹಿಂದಿರುವ ದೊಡ್ಡ ಪಿತೂರಿಯನ್ನು ಭೇದಿಸಲು ಪೊಲೀಸರಿಗೆ ಪ್ರಮುಖ ದಾರಿಯಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಘಟನೆಗಳು ಕೇವಲ ಸ್ವಯಂಪ್ರೇರಿತ ಹಿಂಸಾಚಾರವಲ್ಲ, ಆದರೆ ಯೋಜಿತ ಪಿತೂರಿ ಎಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ, ಪೊಲೀಸರು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ ಮತ್ತು ಪಿತೂರಿಯ ಕೋನದ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ತನಿಖಾ ತಂಡಗಳು ವಿವಿಧ ಸ್ಥಳಗಳಿಂದ ನೂರಾರು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಬಳಸಿಕೊಂಡು ಅವರು ದುಷ್ಕರ್ಮಿಗಳನ್ನು ಗುರುತಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ