ಮಂಗಳೂರು, ಜು.30: ಪತಿಯ ಸತತ ಕಿರುಕುಳ ತಾಳಲಾರದೆ ದೂರದ ರಾಜಸ್ಥಾನದಿಂದ ಕರಾವಳಿಯ ಮಂಗಳೂರಿಗೆ ಬಂದು ದಿಕ್ಕು ಕಾಣದೆ ಒಂಟಿಯಾಗಿ ಅಲೆಯುತ್ತಿದ್ದ ಮಹಿಳೆಯನ್ನು ರಕ್ಷಿಸಿ, ಆಕೆಯ ತಂದೆಯ ವಶಕ್ಕೆ ಒಪ್ಪಿಸುವಲ್ಲಿ ಪಾಂಡೇಶ್ವರ ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆ (NGO) ಯಶಸ್ವಿಯಾಗಿವೆ. ರಾಜಸ್ಥಾನದಲ್ಲಿ ಪತಿಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ ಗೋಪಿ, ಮಾನಸಿಕವಾಗಿ ಜರ್ಜರಿತರಾಗಿ ಮನೆ ತೊರೆದು ಜೂನ್ 26ರಂದು ಮಂಗಳೂರಿಗೆ ಬಂದಿಳಿದಿದ್ದರು. ನಗರದ ಬೀದಿಗಳಲ್ಲಿ ದಿಕ್ಕು ತೋಚದೆ ಒಂಟಿಯಾಗಿ ತಿರುಗಾಡುತ್ತಿದ್ದರು. ಜೂನ್ 26ರಂದು ನಗರದಲ್ಲಿ ಒಂಟಿಯಾಗಿ ಅನುಮಾನಾಸ್ಪದ ಹಾಗೂ ಸಂಕಷ್ಟದ ಸ್ಥಿತಿಯಲ್ಲಿ ಓಡಾಡುತ್ತಿದ್ದ ಈಕೆಯನ್ನು ಗಮನಿಸಿದ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಆಕೆಯನ್ನು ರಕ್ಷಿಸಿದ್ದರು. ರಕ್ಷಿಸಲ್ಪಟ್ಟ ಮಹಿಳೆಯನ್ನು ಸುರಕ್ಷತೆಯ ದೃಷ್ಟಿಯಿಂದ ಮಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ (NGO) ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಆಕೆಗೆ ಸೂಕ್ತ ಆರೈಕೆ ಹಾಗೂ ಕೌನ್ಸೆಲಿಂಗ್ ನೀಡಲಾಯಿತು.
ಮಹಿಳೆಯಿಂದ ಮಾಹಿತಿ ಕಲೆಹಾಕಿದ ಎನ್‌ಜಿಒ ಸಂಸ್ಥೆಯ ಪದಾಧಿಕಾರಿಗಳು, ರಾಜಸ್ಥಾನದಲ್ಲಿದ್ದ ಆಕೆಯ ತಂದೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಮಂಗಳೂರಿಗೆ ಧಾವಿಸಿ ಬಂದ ತಂದೆಗೆ ಸಂಸ್ಥೆಯು ಮಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದೆ. ದೀರ್ಘಕಾಲದ ನಂತರ ಕಷ್ಟದಲ್ಲಿದ್ದ ಮಗಳನ್ನು ಕಂಡ ತಂದೆ ಹಾಗೂ ತಂದೆಯನ್ನು ಅಪ್ಪಿಕೊಂಡ ಮಗಳ ಭಾವುಕ ಕ್ಷಣಕ್ಕೆ ಮಂಗಳೂರಿನ ಎನ್‌ಜಿಒ ಸಂಸ್ಥೆ ಸಾಕ್ಷಿಯಾಯಿತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
