ಬೆಂಗಳೂರು, ಜೂನ್ 15: ಭಾರಿ ಕುತೂಹಲ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ನಾಳೆ ಬಿಡದಿಯ ವಂಡರ್ಲಾ ರೆಸಾರ್ಟ್ಗೆ ಶಿಫ್ಟ್ ಆಗಲಿದ್ದು, ರೆಸಾರ್ಟ್ನಲ್ಲಿ ಒಟ್ಟು 140 ರೂಂ ಬುಕ್ಕಿಂಗ್ ಆಗಿದೆ. ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಮುಖ್ಯಾಂಶಗಳು
- ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ
- ವಂಡರ್ಲಾ ರೆಸಾರ್ಟ್ಗೆ ನಾಳೆ ಕಾಂಗ್ರೆಸ್ ಶಾಸಕರು ಶಿಫ್ಟ್
- ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್ ಶಾಸಕರ ವಾಸ್ತವ್ಯ
ಕಾಂಗ್ರೆಸ್ನ 14 ಶಾಸಕರಿಗೆ ಜೆಡಿಎಸ್ ಸಂಪರ್ಕ ಮಾಡಿರುವ ಮಾಹಿತಿ ಹಿನ್ನೆಲೆ ಅಡ್ಡ ಮತದಾನದ ಭೀತಿ ಶುರುವಾಗಿರುವ ಹಿನ್ನೆಲೆ ರೆಸಾರ್ಟ್ಗೆ ಶಾಸಕರನ್ನು ಶಿಫ್ಟ್ ಮಾಡಲಾಗುತ್ತಿದೆ. ಪಕ್ಷೇತರ ಶಾಸಕರನ್ನು ಕೂಡ ಹೆಚ್ಡಿಕೆ ಸಂಪರ್ಕ ಮಾಡಿದ್ದಾರೆಂಬ ಅನುಮಾನ ಹಿನ್ನೆಲೆ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಕಸರತ್ತು ಶುರುವಾಗಿದೆ. ಜೂ.18ರಂದು ತಂಡ ತಂಡವಾಗಿ ತೆರಳಲಿರುವ ಕಾಂಗ್ರೆಸ್ ಶಾಸಕರು, ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಸ್ಥಗಿತ ಅಂತೆ-ಕಂತೆಗಳಿಗೆ ತೆರೆ ಎಳೆದ ಡಿಕೆ ಶಿವಕುಮಾರ್, ಸಿಎಂ ಕೊಟ್ಟ ಸ್ಪಷ್ಟನೆಯಲ್ಲೇನಿದೆ?
ನಾಳೆ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ
ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ಮೊದಲ ಸಿಎಲ್ಪಿ ಸಭೆ ನಾಳೆ ಸಂಜೆ 6 ಗಂಟೆಗೆ ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿಯೇ ನಡೆಯಲಿದೆ. ಸಿಎಲ್ಪಿ ಸಭೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಶಾಸಕರಿಗೆ ವಿವರವಾದ ತರಬೇತಿ ನಡೆಯಲಿದ್ದು, ಒಂದೇ ಒಂದು ಮತವೂ ತಪ್ಪಾಗದಂತೆ ಎಚ್ಚರ ವಹಿಸಿ ಟ್ರೈನಿಂಗ್ ತಯಾರಿ ನಡೆದಿದೆ. ಅಡ್ಡ ಮತದಾನ, ಮತಗಳ ಅಸಿಂಧು, ಯಾರಿಗೆ ಮತ ಹಾಕಬೇಕೆಂಬ ಗೊಂದಲಗಳನ್ನು ತಪ್ಪಿಸಲು ರೆಸಾರ್ಟ್ ಪಾಲಿಟಿಕ್ಸ್ಗೆ ಕಾಂಗ್ರೆಸ್ ಮುಂದಾಗಿರುವ ಮಾಹಿತಿ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
