ಅರಣ್ಯ ಭೂಮಿ (ಸಾಂದರ್ಭಿಕ ಚಿತ್ರ)Image Credit source: Getty Images
ಬೆಂಗಳೂರು, ಜೂನ್ 15: ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ದೀರ್ಘಕಾಲದ ಕಾನೂನು ಹೋರಾಟಕ್ಕೆ ಕಾರಣವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಭೂಮಿ ವಿವಾದ ಕೊನೆಗೂ ತೆರೆಬೀಳುವ ಹಂತಕ್ಕೆ ಬಂದಿದೆ. ಸುಮಾರು 36 ವರ್ಷಗಳ ಸುದೀರ್ಘ ವಿಳಂಬದ ನಂತರ, ಶಿರಸಿ ಮತ್ತು ಬನವಾಸಿ ಹೆದ್ದಾರಿ ಪಕ್ಕದಲ್ಲಿರುವ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 379 ಎಕರೆ ಅತ್ಯಂತ ಸೂಕ್ಷ್ಮ ಹಾಗೂ ಪವಿತ್ರ ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯಲು ಕರ್ನಾಟಕ ಅರಣ್ಯ ಇಲಾಖೆ ಸಂಪೂರ್ಣ ಸಜ್ಜಾಗಿರುವ ಬಗ್ಗೆ ವರದಿಯಾಗಿದೆ.
ಮುಖ್ಯಾಂಶಗಳು
- 400 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಗೆ ಮುಕ್ತಿ.
- 36 ವರ್ಷಗಳ ದೀರ್ಘ ಕಾನೂನು ಸಮರಕ್ಕೆ ಅಂತ್ಯ.
- ಆನೆಗಳ ಸಂಚಾರ ವಲಯದ ರಕ್ಷಣೆಗೆ ಇಲಾಖೆ ಕ್ರಮ.
ಶಿರಸಿ ಅರಣ್ಯ ಭೂಮಿ ವಿವಾದದ ಹಿನ್ನೆಲೆ
ಈ ಇಡೀ ವಿವಾದ ಶುರುವಾಗಿದ್ದು, 1969ರ ಕಾಲದಲ್ಲಿ. ಆಗಿನ ಮೈಸೂರು ಸರ್ಕಾರವು ಶಿರಸಿ ತಾಲೂಕಿನ ಮೂರು ಹಳ್ಳಿಗಳಲ್ಲಿ ಹರಡಿಕೊಂಡಿರುವ ಈ ಅರಣ್ಯ ಭೂಮಿಯನ್ನು ‘ಶ್ರೀ ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಘ’ಕ್ಕೆ 30 ವರ್ಷಗಳ ಅವಧಿಗೆ ಲೀಸ್ಗೆ (ಗುತ್ತಿಗೆ) ನೀಡಿತ್ತು. ಆದರೆ, 1976ರಲ್ಲಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ಈ ಗುತ್ತಿಗೆ ಅವಧಿಯನ್ನು 20 ವರ್ಷಗಳಿಗೆ ಕಡಿತಗೊಳಿಸಿತು. ಇದರನ್ವಯ ಈ ಗುತ್ತಿಗೆ ಅವಧಿಯು 1989ರಲ್ಲೇ ಅಧಿಕೃತವಾಗಿ ಮುಕ್ತಾಯಗೊಂಡಿತ್ತು. ಆದರೆ, ಪ್ರಭಾವಿ ಭೂಮಾಲೀಕರು ಹಾಗೂ ರಾಜಕೀಯ ಒತ್ತಡದ ಕಾರಣದಿಂದಾಗಿ ಇಲಾಖೆಗೆ ಈ ಭೂಮಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ.
ಕಾನೂನು ಜಟಾಪಟಿ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯ
1980ರಲ್ಲಿ ಕೇಂದ್ರ ಸರ್ಕಾರ ‘ಅರಣ್ಯ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತಂದಿದ್ದರಿಂದ, ಕೇಂದ್ರದ ಅನುಮತಿಯಿಲ್ಲದೆ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ 1993ರಲ್ಲಿ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ಜಾಗ ಖಾಲಿ ಮಾಡುವಂತೆ ಸಹಕಾರಿ ಸಂಘಕ್ಕೆ ನೋಟಿಸ್ ನೀಡಿದ್ದರು. ಆದರೆ, ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64A ಅಡಿಯಲ್ಲಿ ಕ್ರಮ ಕೈಗೊಳ್ಳುವ ಬದಲಿಗೆ ಕೇವಲ ಲೀಗಲ್ ನೋಟಿಸ್ ನೀಡಿದ್ದರಿಂದ, ಸಂಘವು ಸಿವಿಲ್ ನ್ಯಾಯಾಲಯ ಹಾಗೂ ಹೈಕೋರ್ಟ್ ಮೆಟ್ಟಿಲೇರಿ ದಶಕಗಳ ಕಾಲ ಕಾನೂನು ಹೋರಾಟ ಮುಂದುವರಿಯುವಂತೆ ಮಾಡಿತು. 2010 ರಿಂದ 2013ರ ನಡುವೆ ಲೀಸ್ ನವೀಕರಿಸದಿರಲು ಮತ್ತು 1.17 ಕೋಟಿ ರೂ. ಬಾಕಿ ಬಾಡಿಗೆಯೊಂದಿಗೆ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಆದೇಶಿಸಿದರೂ ಅಧಿಕಾರಿಗಳ ಮೌನದಿಂದಾಗಿ ಫೈಲ್ ಧೂಳು ಹಿಡಿದಿತ್ತು ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.
ಕೊನೆಗೂ ಎಚ್ಚೆತ್ತುಕೊಂಡ ಇಲಾಖೆ ಜನವರಿ 2026ರಲ್ಲಿ ಸೆಕ್ಷನ್ 64A ಅಡಿಯಲ್ಲಿ ತೆರವು ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ಸಂಘವು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಟಿ. ಹೀರಾಲಾಲ್ ಅವರು ವಜಾಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶಗಳು ಹಾಗೂ ಬನವಾಸಿ ವಲಯ ಅರಣ್ಯಾಧಿಕಾರಿಗಳು ನೀಡಿರುವ ವರದಿಯನ್ನು ಉಲ್ಲೇಖಿಸಿರುವ ಅವರು, ಈ ಪ್ರದೇಶದಲ್ಲಿ ಆನೆಗಳು ಸೇರಿದಂತೆ ವನ್ಯಜೀವಿಗಳ ನಿಯಮಿತ ಸಂಚಾರವಿದ್ದು, ಇದು ಅತ್ಯಂತ ಪರಿಸರ ಸೂಕ್ಷ್ಮ ವಲಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಕ್ಷಣವೇ ಜಾಗ ಖಾಲಿ ಮಾಡುವಂತೆ ಮತ್ತು ಅಲ್ಲಿರುವ ಕಟ್ಟಡಗಳನ್ನು ಅವರದೇ ವೆಚ್ಚದಲ್ಲಿ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಯ ಅಡುಗೆ ಕೋಣೆ ನವೀಕರಣ!
ಈ ಕುರಿತು ಪ್ರತಿಕ್ರಿಯಿಸಿರುವ ಸಿರ್ಸಿ ಡಿಸಿಎಫ್ ಸಂದೀಪ್ ಸೂರ್ಯವಂಶಿ, ‘ಸಿಸಿಎಫ್ ಆದೇಶ ನಮಗೆ ತಲುಪಿದೆ. ಕಾನೂನಿನ ಪ್ರಕಾರ ನಿವಾಸಿಗಳಿಗೆ ನಿರ್ದಿಷ್ಟ ಸಮಯ ನೀಡಿ ಶೀಘ್ರದಲ್ಲೇ ಭೂಮಿಯನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ’ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
