ಒಂದು ಅಪರೂಪದ ಸಾಮಾಜಿಕ ಚಿತ್ರವಾಗಿ ‘ವಿಸ್ಪರ್ಸ್ ಆಫ್ ದಿ ರಿವರ್’ (Whispers of the River) ಸಿನಿಮಾ ಮೂಡಿಬಂದಿದೆ. ಕನ್ನಡ ಚಿತ್ರರಂಗದಲ್ಲಿ ತರಹೇವಾರಿ ಸಿನಿಮಾಗಳು ಬರುತ್ತಿವೆ. ಲವ್, ಕ್ರೈಮ್, ಸಸ್ಪನ್ಸ್, ಹಾರರ್ ಹೀಗೆ ಅನೇಕ ಪ್ರಕಾರದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಎಲ್ಲಾ ಸಿನಿಮಾಗಳ ನಡುವೆ ವಿಭಿನ್ನ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ‘ವಿಸ್ಪರ್ಸ್ ಆಫ್ ದಿ ರಿವರ್’ ಸಿನಿಮಾ ಸಿದ್ಧವಾಗಿದೆ. ಕೆ. ಪ್ರಭಾಕರನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..
ಈ ಸಿನಿಮಾದಲ್ಲಿ ಮಂಜುನಾಥ್ ಪೈ ಅವರು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ನಟನೆ ಜೊತೆಗೆ ಮಂಜುನಾಥ್ ಪೈ ಅವರೇ ಚಿತ್ರಕಥೆಯನ್ನು ಬರೆದಿದ್ದಾರೆ. ಈ ಸಿನಿಮಾವನ್ನು ಸ್ನೇಹಿತರಾದ ರಾಧಾಕೃಷ್ಣ ಪೈ, ಶ್ರೀರಾಮ್ ಸಿ, ವಿವೇಕ್ ವಿನ್ಸೆಂಟ್ ಸೇರಿ ‘ಮೀನಾಸ್ ಸ್ಟುಡಿಯೋ’ ಬ್ಯಾನರ್ ಮೂಲಕ ನಿರ್ಮಿಸಿದ್ದಾರೆ. ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವೃತ್ತಿಪರರು, ಸಿನಿಮಾ ತಂತ್ರಜ್ಞರು ಮತ್ತು ನಾಟಕ ಕಲಾವಿದರೆಲ್ಲರು ಒಟ್ಟಿಗೆ ಸೇರಿ ಈ ಸಿನಿಮಾವನ್ನು ರೂಪಿಸಿದ್ದಾರೆ.
ನದಿಗಳೊಂದಿಗೆ ನಮ್ಮ ಸಂಬಂಧವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ನದಿಗಳನ್ನು ಉಳಿಸುವ ಬಗ್ಗೆ ಭಾವನಾತ್ಮಕವಾಗಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಇತ್ತೀಚೆಗೆ ಬಿಡುಗಡೆ ಆಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋಗಳಲ್ಲಿ ಸಿನಿ ಗಣ್ಯರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದು ಚಿತ್ರತಂಡ ಹೇಳಿದೆ.
‘ವಿಸ್ಪರ್ಸ್ ಆಫ್ ದಿ ರಿವರ್’ ಸಿನಿಮಾದ ಬಗ್ಗೆ ಹೇಳುವುದಾರೆ, ಕೃಷಿಗೆ ಸಂಬಂಧಿತ ವ್ಯವಹಾರವನ್ನು ವಿಸ್ತರಿಸುವ ಕನಸನ್ನು ಹೊಂದಿರುವ ಮಗ ಕೆಲಸ ಬಿಟ್ಟು ಊರಿಗೆ ಮರಳುತ್ತಾನೆ. ಆದರೆ ತಂದೆ-ಮಗನ ನಡುವಿನ ವಿಭಿನ್ನ ದೃಷ್ಟಿಕೋನಗಳು ಸಂಘರ್ಷಕ್ಕೆ ಕಾರಣವಾಗುತ್ತವೆ. ಬಳಿಕ ಮಗ ಮಣ್ಣು, ನದಿ ಹಾಗೂ ಮೂಲ ಮೌಲ್ಯಗಳೊಂದಿಗೆ ಬಾಂಧವ್ಯ ಬೆಳಸಿಕೊಳ್ಳುತ್ತಾನೆ. ಹೀಗೆ ಸಾಗುತ್ತದೆ ಕಥೆ.
ಇದನ್ನೂ ಓದಿ: ಫಿಲ್ಮ್ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ
ಈ ಸಿನಿಮಾಗೆ ರೋಹಿತ್ ಪೂಜಾರಿ ಸಂಗೀತ ನೀಡಿದ್ದಾರೆ. ಕೆ. ಸತ್ಯರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶಬಾನಾ, ಕಾಂತಾರ ಖ್ಯಾತಿಯ ಪ್ರಭಾಕರ್ ಕುಂದರ್ ಮತ್ತು ದಿ. ಪ್ರಭಾಕರ್ ಕಲ್ಯಾಣಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಒಟಿಟಿ ಮೂಲಕ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
