ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತೀಚೆಗಷ್ಟೆ ತೀವ್ರ ಜ್ವರದಿಂದ ನರಳಿದ್ದ ಪವಿತ್ರಾ ಗೌಡ ವಿಚಾರಣೆ ಗೈರಾಗಿದ್ದರು. ನಿನ್ನೆ (ಮಂಗಳವಾರ) ಪರಪ್ಪನ ಅಗ್ರಹಾರ ಬಂಧಿಖಾನೆಗೆ ಭೇಟಿ ಮಹಿಳಾ ಬ್ಯಾರಕ್ಗಳ ವೀಕ್ಷಣೆ ಮಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಬ್ಯಾರಕ್ಗಳ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಜೊತೆಗೆ ಕೈದಿಗಳೊಟ್ಟಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದ್ದಾಗಿಯೂ ಹೇಳಿದರು. ಇದೇ ವೇಳೆ ಆರೋಪಿ ಪವಿತ್ರಾ ಗೌಡ ಬಗ್ಗೆ ವಿಶೇಷ ಕಾಳಜಿಯಿಂದ ಮಾತನಾಡಿದ್ದಾರೆ.
‘ಪವಿತ್ರಾ ಗೌಡ ಸೇರಿದಂತೆ ಹಲವು ಕೈದಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡೆ. ಅವರ ಸ್ಥಿತಿ ಹೇಳಬಾರದು. ಪವಿತ್ರಾ ನನಗೆ ಮಗಳ ಸಮಾನ. ಕಾನೂನು ಪ್ರಕಾರ ಏನು ಆಗಬೇಕೊ ಅದು ಆಗುತ್ತದೆ. ಅವರು ಸಾಕಷ್ಟು ನೊಂದಿದ್ದಾರೆ’ ಎಂದರು ನಾಗಲಕ್ಷ್ಮಿ. ಇತರೆ ಮಹಿಳಾ ಕೈದಿಗಳ ಜೊತೆಗೂ ಮಾತನಾಡಿದ್ದು ಮಾಹಿತಿ ಪಡೆದಿದ್ದೇನೆ. ಮಹಿಳೆಯರು ಭಾವನಾತ್ಮಕ ಜೀವಿಗಳು, ಹಲವಾರು ಮಂದಿ ಮಾನಸಿಕವಾಗಿ ಕುಗ್ಗಿದ್ದಾರೆ’ ಎಂದರು.
ಮಹಿಳಾ ಬ್ಯಾರಕ್ಗಳ ಪರಿಶೀಲನೆ ಬಗ್ಗೆ ಮಾತನಾಡಿದ ನಾಗಲಕ್ಷ್ಮಿ, ‘ಕೈದಿಗಳಿಗೆ ನೀಡುವ ಊಟ, ಸೋಪು, ಪೇಸ್ಟ್ ಸೇರಿದಂತೆ ಇತರೆ ಸೌಲಭ್ಯಗಳನ್ನೂ ಪರಿಶೀಲಿಸಿದ್ದೇವೆ. ಬ್ಯಾರಕ್ಗಳಲ್ಲಿ ವಿಪರೀತವಾದ ಸೊಳ್ಳೆಗಳ ಕಾಟ ಇದೆ ಎಂದು ಹಲವು ಕೈದಿಗಳು ದೂರು ಹೇಳಿದ್ದಾರೆ. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾಗಿಯೂ ನಾಗಲಕ್ಷ್ಮಿ ಅವರು ಹೇಳಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾಗಲಕ್ಷ್ಮಿ ಅವರು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಹಲೆವೆಡೆ ಸುತ್ತಾಡಿ ಅವರು ಮಹಿಳೆಯರ ಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
ಇನ್ನು ಪವಿತ್ರಾ ಗೌಡ, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದಾರೆ. ಈ ಹಿಂದೆ ಅವರಿಗೆ ಜಾಮೀನು ಸಿಕ್ಕಿತ್ತಾದರೂ ಸುಪ್ರೀಂಕೋರ್ಟ್ನಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪ್ರಕರಣದ ಇನ್ನೂ ಕೆಲವು ಆರೋಪಿಗಳ ಜಾಮೀನು ರದ್ದಾಗಿದೆ. ಈ ಹಿಂದೆ ಪವಿತ್ರಾ ಗೌಡ ಅವರ ವಕೀಲರು ಮಾಡಿದ್ದ ವಾದದ ಪ್ರಕಾರ, ಪವಿತ್ರಾ ಅವರು ರೇಣುಕಾ ಸ್ವಾಮಿಗೆ ಕಪಾಳಕ್ಕೆ ಹೊಡೆದಿರುವುದು ಬಿಟ್ಟರೆ ಇನ್ನೇನೂ ಮಾಡಿರಲಿಲ್ಲ, ಹಾಗೂ ಘಟನೆ ನಡೆದಾಗ ಅವರು ಆ ಸ್ಥಳದಲ್ಲಿ ಸಹ ಇರಲಿಲ್ಲ ಎಂದಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ