KIMS ಅಧ್ಯಯನದಲ್ಲಿ ಆತಂಕಕಾರಿ ಸಂಗತಿ ಬಯಲುImage Credit source: tv9
ಹುಬ್ಬಳ್ಳಿ, ಆಗಸ್ಟ್ 19: ಕೃಷಿ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆ ಹೆಚ್ಚುತ್ತಿರುವ ಬೆನ್ನಲ್ಲೇ, ರೈತರ ಆರೋಗ್ಯದ ಮೇಲಿನ ದುಷ್ಪರಿಣಾಮದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ರೈತರ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು ಎಂಬುದು ಹುಬ್ಬಳ್ಳಿ (Hubballi KIMS) ನ ಬಹುಶಿಸ್ತೀಯ ಅಧ್ಯಯನ ಘಟಕದ ಸಂಶೋಧನೆಯಿಂದ ತಿಳಿದುಬಂದಿದೆ.
ಕಡಿಮೆ ಜಮೀನಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಹಲವು ರೈತರು ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ವಿಶೇಷವಾಗಿ ನೀರಾವರಿ ಸೌಲಭ್ಯ ಹೊಂದಿರುವ ಹಾಗೂ ಜಲಾಶಯಗಳ ಕೆಳಭಾಗದ ಪ್ರದೇಶಗಳ ರೈತರು ಹೆಚ್ಚಿನ ಇಳುವರಿಗಾಗಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿರುವುದು ಪರಿಸರದ ಜೊತೆಗೆ ರೈತರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
13 ರೈತರ ಮೇಲೆ ಅಧ್ಯಯನ
ಹುಬ್ಬಳ್ಳಿ KIMSನ ಬಹುಶಿಸ್ತೀಯ ಅಧ್ಯಯನ ಘಟಕವು ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ 13 ರೈತರನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿತ್ತು. ಈ ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಿದ ಬಳಿಕ 2ರಿಂದ 15 ದಿನಗಳ ಅವಧಿಯಲ್ಲಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.
ರೈತರ ರಕ್ತ ಪರೀಕ್ಷೆ ವೇಳೆ ಆಘಾತಕಾರಿ ಮಾಹಿತಿ ಬಯಲು
ಪರೀಕ್ಷೆಯ ವೇಳೆ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕ್ರಿಮಿನಾಶಕ ಸಿಂಪಡಣೆ ಮಾಡಿದ 15 ದಿನಗಳ ಬಳಿಕವೂ ಕೆಲವು ರೈತರ ರಕ್ತದ ಮಾದರಿಯಲ್ಲಿ ಕ್ರಿಮಿನಾಶಕದ ಅಂಶಗಳು ಪತ್ತೆಯಾಗಿವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ರೈತರ ದೇಹಕ್ಕೆ ಕ್ರಿಮಿನಾಶಕ ಹೇಗೆ ಪ್ರವೇಶಿಸುತ್ತದೆ ಮತ್ತು ದೀರ್ಘಕಾಲದಲ್ಲಿ ಅದರ ಪರಿಣಾಮ ಏನಾಗಬಹುದು ಎಂಬುದರ ಕುರಿತು ಮತ್ತಷ್ಟು ಅಧ್ಯಯನ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯದ ಮೇಲೆ ಯಾವ ಪರಿಣಾಮ?
ಕ್ರಿಮಿನಾಶಕಗಳ ಸಂಪರ್ಕದಿಂದ ರೈತರ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ನಡೆಸಿದ ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ಮೂತ್ರಪಿಂಡ, ಹೃದಯ ಹಾಗೂ ಚಯಾಪಚಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಗಮನ ಅಗತ್ಯವಿದೆ.
ಆದರೆ ನಿರ್ದಿಷ್ಟ ವ್ಯಕ್ತಿಯಲ್ಲಿ ಕಿಡ್ನಿ ವೈಫಲ್ಯ, ಮಧುಮೇಹ ಅಥವಾ ಹೃದಯ ಕಾಯಿಲೆಗೆ ಕ್ರಿಮಿನಾಶಕವೇ ನೇರ ಕಾರಣ ಎಂದು ಈ ಸಣ್ಣ ಪ್ರಮಾಣದ ಅಧ್ಯಯನದಿಂದ ಅಂತಿಮವಾಗಿ ಹೇಳಲು ಸಾಧ್ಯವಿಲ್ಲ. ಈ ಸಂಬಂಧವನ್ನು ದೃಢಪಡಿಸಲು ದೊಡ್ಡ ಪ್ರಮಾಣದ ಮತ್ತು ದೀರ್ಘಾವಧಿಯ ಸಂಶೋಧನೆ ಅಗತ್ಯವಿದೆ ಎಂದೂ ತಜ್ಞರು ಹೇಳಿದ್ದಾರೆ.
ಕ್ರಿಮಿನಾಶಕ ದೇಹಕ್ಕೆ ಸೇರುವುದು ಹೇಗೆ?
ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಉಸಿರಾಟದ ಮೂಲಕ ಹಾಗೂ ಚರ್ಮದ ಸಂಪರ್ಕದ ಮೂಲಕ ರಾಸಾಯನಿಕಗಳು ದೇಹಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ಸಿಂಪಡಣೆ ಮಾಡುವಾಗ ರೈತರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು KIMS ತಜ್ಞರು ಸಲಹೆ ನೀಡಿದ್ದಾರೆ.
ರೈತರು ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
ಕ್ರಿಮಿನಾಶಕ ಸಿಂಪಡಿಸುವಾಗ ರೈತರು ಕಡ್ಡಾಯವಾಗಿ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಮುಖಕ್ಕೆ ಸೂಕ್ತ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸುವುದರ ಜೊತೆಗೆ ದೇಹವನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಬಳಸಬೇಕು.
ಸಿಂಪಡಣೆ ಮಾಡುವ ಸಂದರ್ಭದಲ್ಲಿ ಆಹಾರ ಅಥವಾ ನೀರು ಸೇವಿಸುವುದನ್ನು ತಪ್ಪಿಸಬೇಕು. ಕ್ರಿಮಿನಾಶಕ ಸಿಂಪಡಣೆ ಮುಗಿದ ಬಳಿಕ ಕೈ, ಮುಖ ಹಾಗೂ ದೇಹವನ್ನು ಚೆನ್ನಾಗಿ ತೊಳೆಯಬೇಕು. ಬಟ್ಟೆಗಳಿಗೂ ರಾಸಾಯನಿಕ ತಗುಲಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸುವುದು ಅಗತ್ಯ.

ರೈತರು ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಬಾರದು ಎಂದು KIMS ಬಹುಶಿಸ್ತೀಯ ಅಧ್ಯಯನ ಘಟಕದ ನೋಡಲ್ ಅಧಿಕಾರಿ ಡಾ. ರಾಮ್ ಕವಲಗುಡ್ಡ ಸಲಹೆ ನೀಡಿದ್ದಾರೆ.
ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅಧ್ಯಯನಕ್ಕೆ ಸಿದ್ಧತೆ
KIMS ಬಹುಶಿಸ್ತೀಯ ಅಧ್ಯಯನ ಘಟಕವು ನಡೆಸಿರುವ ಅಧ್ಯಯನದ ವರದಿಯನ್ನು ರಾಜ್ಯ ಆರೋಗ್ಯ ಸಚಿವರಿಗೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯ ರೈತರನ್ನು ಒಳಗೊಂಡು ದೊಡ್ಡ ಪ್ರಮಾಣದ ಅಧ್ಯಯನ ನಡೆಸುವ ಉದ್ದೇಶವೂ ಇದೆ.
ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಸುಲಭವಲ್ಲ. ಆದರೆ ಅಗತ್ಯಕ್ಕಿಂತ ಹೆಚ್ಚು ಕ್ರಿಮಿನಾಶಕ ಬಳಕೆ ಮಾಡದಿರುವುದು ಮತ್ತು ಸಿಂಪಡಣೆ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಅನ್ನ ನೀಡುವ ರೈತರ ಆರೋಗ್ಯವೇ ಅಪಾಯಕ್ಕೆ ಸಿಲುಕದಂತೆ ಜಾಗೃತಿ ಮೂಡಿಸುವ ಅಗತ್ಯ ಇದೀಗ ಹೆಚ್ಚಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ