ಕೆಲವೇ ದಿನಗಳ ಹಿಂದೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಜೋಗಿ ಪ್ರೇಮ್, ಎ.ಪಿ. ಅರ್ಜುನ್, ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ (Dhruva Sarja) ಮುಂತಾದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈಗ ಮಾಧ್ಯಮದ ಎದುರು ಅವರು ಕ್ಷಮೆ ಕೇಳಿದ್ದಾರೆ. ‘ನಾನು ಕಾಟನ್ಪೇಟೆ ಗೇಟ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾವುಕವಾಗಿ ಕೆಲವು ವಿಚಾರಗಳನ್ನು ಮಾತನಾಡಿದ್ದೆ. ಕಾರಣ ಇಷ್ಟೇ, ಆ ಸಿನಿಮಾ ರಿಲೀಸ್ ಆಗಬೇಕಿತ್ತು. ಸ್ವಲ್ಪ ಹಣದ ಅವಶ್ಯಕತೆ ಇತ್ತು. ತುಂಬಾ ದುಃಖದಿಂದ ಮಾತನಾಡಿದೆ. ರಾಜ್ಕುಮಾರ್ ಎಂದರೆ ನನಗೆ ಬಹಳ ಅಭಿಮಾನ. ಪುನೀತ್ ಸರ್ ನಿಜವಾಗಿಯೂ ದೇವರು. ನನ್ನ ಜೊತೆ ಸಿನಿಮಾ ಮಾಡುವುದಕಿಂತ ಮೊದಲಿನಿಂದಲೂ ಅವರ ಜೊತೆ ಒಡನಾಟ ಇದೆ. ಅವರು ಕನಕಪುರಕ್ಕೆ ಬರುತ್ತಿದ್ದರು’ ಎಂದು ಕನಕಪುರ ಶ್ರೀನಿವಾಸ್ (Kanakapura Srinivas) ಹೇಳಿದ್ದಾರೆ.
‘ಮುಯೂರ ಎಂಬ ಸಿನಿಮಾ ಅನೌನ್ಸ್ ಮಾಡಿದ್ದೆ. ಆ ಸಿನಿಮಾ ಆಗಲಿಲ್ಲ. ನನ್ನ ದುಡ್ಡಿಗೋಸ್ಕರ ದೇವರು ಅವರನ್ನು ತೆಗೆದುಕೊಂಡ ಅಂತ ನಾನು ಹೇಳಿದ್ದೆ. ಆ ಮಾತನ್ನು ನಾನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು 7 ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಬೇಕು. ಪುನೀತ್ ಅವರು ದೇವರಾಗಿಯೇ ಮೇಲೆ ಇರುತ್ತಾರೆ. ಶಿವರಾಜ್ಕುಮಾರ್, ಗೀತಮ್ಮ ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ. ಅವರ ಸಹಕಾರ ನಾನು ಎಂದಿಗೂ ಮರೆಯುವಂತಿಲ್ಲ’ ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
‘ನಾನು ವಿದ್ಯಾವಂತ ಅಲ್ಲ. ಮನಸ್ಸಿನಲ್ಲಿ ಏನು ಇದೆಯೋ ಅದನ್ನೆಲ್ಲ ಹೇಳಿಬಿಟ್ಟಿದ್ದೇನೆ. ಶಿವಣ್ಣ ನಾನು ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಸಿನಿಮಾ ನಾವಿನ್ನೂ ಮಾಡಬೇಕು. ನಾನು ಏನಾದರೂ ತಪ್ಪಾಗಿ ಮಾತನಾಡಿದ್ದರೆ ದಯವಿಟ್ಟು ಕ್ಷಮಿಸಬೇಕು. ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ ಕನಕಪುರ ಶ್ರೀನಿವಾಸ್.
‘ದರ್ಶನ್ ನಮ್ಮ ಮಾಸ್ ಹೀರೋ. ಅವರು ನನಗೆ ದುಡ್ಡು ಕೊಡಬೇಕು ಅಂತ ಹೇಳಿದ್ದೇನೆ. ಅದು ತಪ್ಪು. ಅವರ ಹೊರಗೆ ಬಂದಮೇಲೆ ಜೊತೆಗೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಅದನ್ನು ಈಡೇರಿಸಿಕೊಡಿ’ ಎಂದು ಕನಕಪುರ ಶ್ರೀನಿವಾಸ್ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್
‘ಧ್ರುವ ಸರ್ಜಾ ಅವರ ಜೊತೆ ನಾನು 3 ಸಿನಿಮಾ ಮಾಡಿದ್ದೇನೆ. ನಾನೊಬ್ಬ ಹಳ್ಳಿ ಹುಡುಗ. ನಿಮ್ಮಂಥ ಕಲಾವಿದರು ಬೇಕು. ನಮಗೆ ದಯವಿಟ್ಟು ಕಾಲ್ಶೀಟ್ ಕೊಡಿ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇವೆ. ಸಿನಿಮಾ ಮಾಡಿಕೊಡಿ. ಪ್ರೇಮ್, ಎ.ಪಿ. ಅರ್ಜುನ್ ಅವರು ಸಿನಿಮಾ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನನಗೆ ದುಡ್ಡು ಬೇಡ, ಸಿನಿಮಾ ಮಾಡಿಕೊಡಿ. ದಯವಿಟ್ಟು ನೀವೆಲ್ಲ ಸಹಕರಿಸಬೇಕು’ ಎಂದು ಕನಕಪುರ ಶ್ರೀನಿವಾಸ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
