ಡಿಸಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರುImage Credit source: tv9 kannada
ಬಾಗಲಕೋಟೆ, ಫೆಬ್ರವರಿ 18: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ ವೈ ಮೇಟಿ ನಿಧನ ಹಿನ್ನೆಲೆ ಉಪಚುನಾವಣೆಗೆ (by election) ಭರ್ಜರಿ ತಯಾರಿ ನಡೆದಿದೆ. ಈ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತೀವೆ. ಈ ಮಧ್ಯೆ ಕ್ಷೇತ್ರದಲ್ಲಿ ಅಕ್ರಮ ವೋಟರ್ಗಳ (voters) ಸದ್ದು ಜೋರಾಗಿದೆ. ಈ ಬಗ್ಗೆ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮುಖಂಡರು ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಅದೊಂದು ಆರೋಪ ಮಾಡಿದ್ದರು. ಚರಂತಿಮಠ ತಾವು ಕಾರ್ಯಾಧ್ಯಕ್ಷ ಆಗಿರುವ ಬಿವಿವಿ ಸಂಘದ ವಿದ್ಯಾರ್ಥಿಗಳನ್ನು ಮತದಾರರನ್ನಾಗಿ ಮಾಡುತ್ತಿದ್ದಾರೆ. ಅಲ್ಲೂ ಕೂಡ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ಡಿಸಿಗೆ ಮನವಿ ಸಲ್ಲಿಸಿದ್ದರು.
ಡಬಲ್ ವೋಟರ್ಸ್ ಕಡಿವಾಣಕ್ಕೆ ಚರಂತಿಮಠ ಆಗ್ರಹ
ಇದೀಗ ವೀರಣ್ಣ ಚರಂತಿಮಠ ಬಾಗಲಕೋಟೆ ಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 7272 ಡಬಲ್ ವೋಟರ್ಸ್ಗಳಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಎರಡೆರಡು ಬೂತ್ನಲ್ಲಿ ಒಬ್ಬ ವ್ಯಕ್ತಿಯ ಹೆಸರುಗಳಿವೆ. ಎರಡೆರೆಡು ಬೂತ್ ಪ್ರಕಾರ ಎರಡೆರಡು ವೋಟರ್ ಐಡಿ ನಂಬರ್ ಇವೆ ಎಂದು ದಾಖಲೆ ಒದಗಿಸಿದ್ದಾರೆ. ಬಿಜೆಪಿ ಮುಖಂಡರು ಡಿಸಿ ಅವರಿಗೆ ದಾಖಲೆ ನೀಡಿ ಇವುಗಳನ್ನು ಸರಿಪಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಬಲ್ ವೋಟರ್ಸ್ ಈ ಹಿಂದೆ ಮತದಾನ ಕೂಡ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಡಿಸಿ ಸಂಗಪ್ಪ ಹೇಳಿದ್ದಿಷ್ಟು
ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಈ ಘಟನೆ ನಡೆದಿದೆ. ಇದನ್ನು ಬಿಜೆಪಿ ಬೂತ್ ಅಧ್ಯಕ್ಷರು, ಬೂತ್ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಇನ್ನು ಮನವಿ ಸ್ವೀಕರಿಸಿ ಮಾತನಾಡಿದ ಡಿಸಿ ಸಂಗಪ್ಪ, ಚುನಾವಣಾ ಸಿಬ್ಬಂದಿ ಮೂಲಕ ಈ ಬಗ್ಗೆ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ್ದಾರೆ. ಇನ್ನು ಈ ಬಗ್ಗೆ ದಾಖಲೆ ನೀಡಿದ ಜಿಲ್ಲಾಡಳಿತ ಬಾಗಲಕೋಟೆ ಕ್ಷೇತ್ರದಲ್ಲಿ 538 ಜನ ನಿಧನ ಹೊಂದಿದವರ ಹೆಸರು ಡಿಲಿಟ್ ಮಾಡಲಾಗಿದೆ. 382 ಜನ ಬೇರೆ ಕಡೆ ಸ್ಥಳಾಂತರವಾಗಿದ್ದಾರೆ. 341 ಜನರ ಹೆಸರು ಮಾತ್ರ ಡಬಲ್ ಇದ್ದವು. ಅವುಗಳನ್ನು ಸರಿ ಮಾಡಲಾಗಿದೆ. 7272 ಡಬಲ್ ವೋಟರ್ಸ್ ಇಲ್ಲ. ಅದು ಕನ್ನಡ ಮತ್ತು ಇಂಗ್ಲಿಷ್ನಲ್ಲಿರುವ ಮತದಾರರ ಪಟ್ಟಿ ಮೂಲಕ ಗೊಂದಲವಾಗಿದೆ. ಬಿಜೆಪಿಯವರ ಮನವಿ ಸ್ವೀಕರಿಸಿದ್ದು, ಎಲ್ಲಾ ರೀತಿಯಿಂದ ಪರಿಷ್ಕರಣೆ ನಡೆದಿದೆ. ಲೋಪದೋಷ ಇರೋದನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವೋಟ್ ಚೋರಿ ಎಂದ ‘ಕೈ’ಗೆ ಬಿಜೆಪಿ ಗುದ್ದು: ಕಾಂಗ್ರೆಸ್ ವಿರುದ್ಧವೇ ಮತದಾರರ ಪಟ್ಟಿ ಅಕ್ರಮ ಆರೋಪ!
ಒಟ್ಟಿನಲ್ಲಿ ಉಪಚುನಾವಣೆ ಕಾವು ಆರಂಭಕ್ಕೂ ಮುನ್ನ ಅಕ್ರಮ ಮತದಾರರ ಸದ್ದು ಜೋರಾಗಿದ್ದು, ಜಿಲ್ಲಾಡಳಿತ ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಸರಿಪಡಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
