ಬೆಂಗಳೂರು, ಆಗಸ್ಟ್ 1: ದುಷ್ಟಶಕ್ತಿ ನಿವಾರಣೆ ಹಾಗೂ ಪೂಜೆಯ ನೆಪದಲ್ಲಿ ಬೆಂಗಳೂರಿನ (Bengaluru) ಚಾಮರಾಜಪೇಟೆ ನಿವಾಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 2.5 ಕೋಟಿ ರೂ. ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. 2.5 ಕೋಟಿ ರೂ. ನೀಡಿದರೆ 10 ಕೋಟಿ ರೂ. ಕೊಡಿಸುವುದಾಗಿ ನಂಬಿಸಿ ಹಣ ಪಡೆದ ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಮಗನ ಸಾವಿಗೆ ದುಷ್ಟಶಕ್ತಿಯೇ ಕಾರಣವೆಂದು ನಂಬಿಸಿ ಕೃತ್ಯ
ದೂರುದಾರ ಮಹಿಳೆ ಕುಮುದಾ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ಅವರ ಪುತ್ರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಕುಮುದಾ ಅವರ ಮನೆಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಮಗನಿಗೆ ಅನಾಹುತವಾಗಿದೆ ಆ ಘಟನೆ ಬಳಿಕ ಎಂದು ಆರೋಪಿಗಳು ನಂಬಿಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಮೂಲಕ ಕುಮುದಾ ಅವರಿಗೆ ಅಪ್ಸರ್ ಪಾಷಾ ಎಂಬಾತನನ್ನು ಬಾಬಾ ಎಂದು ಪರಿಚಯಿಸಲಾಗಿತ್ತು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ನಡೆಸುವ ನೆಪದಲ್ಲಿ ಆರಂಭದಲ್ಲಿ 8 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.
2.5 ಕೋಟಿ ರೂ. ಕೊಟ್ಟರೆ 10 ಕೋಟಿ ರೂ. ನೀಡುವುದಾಗಿ ವಂಚನೆ
ನಂತರ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಕುಮುದಾ ಅವರನ್ನು ನಂಬಿಸಿದ್ದಾರೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್‌ನಿಂದ 500 ಕೋಟಿ ರೂ. ಬರಲಿದೆ. ಆ ಹಣವನ್ನು ಪಡೆಯಲು ತಕ್ಷಣ ಹಣದ ಅಗತ್ಯವಿದೆ ಎಂದು ಹೇಳಿ, 2.5 ಕೋಟಿ ರೂ. ಸಾಲವಾಗಿ ನೀಡಿದರೆ ಬಳಿಕ 10 ಕೋಟಿ ರೂ. ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಮನೆ ಮಾರಾಟ ಮಾಡಿ ಆರೋಪಿಗಳಿಗೆ ಹಣ ನೀಡಿದ್ದ ಸಂತ್ರಸ್ತೆ
ಆರೋಪಿಗಳ ಮಾತನ್ನು ನಂಬಿದ ಕುಮುದಾ, ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಮನೆ ಮಾರಾಟದಿಂದ ಬಂದ ಹಣದಲ್ಲಿ 2.5 ಕೋಟಿ ರೂ.ಗಳನ್ನು ಆರೋಪಿಗಳಿಗೆ ನೀಡಿದ್ದು, ಬಳಿಕ ಹಣ ವಾಪಸ್ ಕೇಳಿದಾಗ ವಂಚನೆ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ
ಹಣವನ್ನು ವಾಪಸ್ ನೀಡುವಂತೆ ಕುಮುದಾ ಕೇಳಿದಾಗ ಆರೋಪಿಗಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ವಿವಿಧ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
