ಕ್ರಿಕಟ್ ಲೋಕಕ್ಕೂ ಬಣ್ಣದ ಲೋಕಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್ ಲೋಕದ ಅನೇಕರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆ. ಶೋನಲ್ಲಿ ಮಿಂಚಿದ್ದೂ ಇದೆ. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಸರದಿ. ಅವರು ಮೈದಾನದ ಹೊರಗೂ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಹೊಸ ಟೀಸರ್, ರೋಹಿತ್ ಶರ್ಮಾ ಅವರ (Rohit Sharma) ಮನರಂಜನಾ ಲೋಕದ ಪದಾರ್ಪಣೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಸೋನಿ ಪಿಕ್ಚರ್ಸ್ ಹಂಚಿಕೊಂಡಿರುವ ಟೀಸರ್ ಗಮನ ಸೆಳೆದಿದೆ. ರೋಹಿತ್ ಅವರನ್ನು ಫ್ಯಾನ್ಸ್ ಭೇಟಿ ಮಾಡುತ್ತಾರೆ. ಅವರು ಮಾಡಿದ ಸಾಧನೆಯನ್ನು ಹೊಗಳುತ್ತಾರೆ. ಆದರೆ, ಎಲ್ಲರಿಗೂ ಇಷ್ಟ ಆಗಿದ್ದು ಅವರ ಆಟವಲ್ಲ, ಬದಲಿಗೆ ಮೈದಾನದಲ್ಲಿ ಹೇಳಿದ್ದ ‘ಕೋಯಿ ಭಿ ಗಾರ್ಡನ್ ಮೇ ನಹೀ ಘುಮೇಗಾ’ (ಯಾರೂ ಗಾರ್ಡನ್‌ನಲ್ಲಿ ಓಡಾಡುವಂತಿಲ್ಲ) ಎಂಬ ಸಾಲುಗಳು. ಇದನ್ನು ಹೇಳುವಂತೆ ಎಲ್ಲರೂ ಒತ್ತಾಯಿಸುತ್ತಾರೆ.
ಮೈದಾನದಲ್ಲಿ ರೋಹಿತ್ ಆಡಿದ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ವೈರಲ್ ಆಗಿತ್ತು ಎಂದರೆ, ಈಗ ಅದೇ ಸಾಲುಗಳಿಂದ ಎಲ್ಲರೂ ಅವರನ್ನು ಗುರುತಿಸುವಂತಾಗಿದೆ. ಇದಕ್ಕೆ ಪ್ರತಿಕ್ರಿಯಿಸುವ ರೋಹಿತ್, ‘ಕೇವಲ ಎರಡು ಸಾಲು ಹೇಳಿದ್ದಕ್ಕೆ ಇಷ್ಟೊಂದು ವೈರಲ್ ಆಯ್ತು, ಇನ್ನು ನನ್ನ ಪೂರ್ತಿ ಶೋ ಬಂದರೆ ಏನಾಗಬಹುದು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಹಿಟ್ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ
ರೋಹಿತ್ ಶರ್ಮಾ ಅವರು ರಿಯಾಲಿಟಿ ಶೋ ಅಥವಾ ಟಾಕ್ ಶೋ ಮೂಲಕ ಕಿರುತೆರೆಗೆ ಬರಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಇದು ಯಾವ ರೀತಿಯ ಶೋ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಈ ಕಾರ್ಯಕ್ರಮವು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್ ಒಟಿಟಿಯಲ್ಲಿ ಶೀಘ್ರದಲ್ಲೇ ಬರಲಿದೆ ಎಂಬುದಷ್ಟೇ ಖಚಿತವಾಗಿದೆ. ವಿಶ್ವಕಪ್ ವಿಜೇತ ನಾಯಕ ಈಗ ಬ್ಯಾಟ್ ಬಿಟ್ಟು ಮೈಕ್ ಹಿಡಿದು ಪ್ರೇಕ್ಷಕರನ್ನು ಹೇಗೆ ರಂಜಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
