ಫಿಫಾ ವಿಶ್ವಕಪ್‌ನ ‘ರೌಂಡ್ ಆಫ್ 32’ ಹಂತದ ರೋಚಕ ಪೈಪೋಟಿ ಮುಂದುವರೆದಿದೆ. ಈ ಬಾರಿಯ ಪೈಪೋಟಿಯಲ್ಲಿ ಮುಖಾಮುಖಿಯಾಗಿದ್ದು ಬೆಲ್ಜಿಯಂ ಮತ್ತು ಸೆನೆಗಲ್. ಈ ತಂಡಗಳ ನಡುವಿನ ಕದನವು ಫುಟ್‌ಬಾಲ್ ಇತಿಹಾಸದಲ್ಲೇ ಎಂದಿಗೂ ಮರೆಯಲಾಗದ ರೋಮಾಂಚಕ ಹಾಗೂ ವಿವಾದಾತ್ಮಕ ಅಂತ್ಯವನ್ನು ಕಂಡಿದೆ.
ಏಕೆಂದರೆ ಹೆಚ್ಚುವರಿ ಸಮಯದ ಕೊನೆಯ ನಿಮಿಷದಲ್ಲಿ ಲಭಿಸಿದ ಒಂದು ಪೆನಾಲ್ಟಿ ತೀರ್ಪು ಇಡೀ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ಈ ಪೆನಾಲ್ಟಿ ತೀರ್ಪಿನ ವಿರುದ್ಧ ಇದೀಗ ಪರ-ವಿರೋಧ ಚರ್ಚೆಗಳು ಶುರುವಾಗಿದೆ.
ಮೈದಾನದಲ್ಲಿ ನಡೆದಿದ್ದೇನು?
ಮೊದಲಾರ್ಧದಲ್ಲಿ ಸೆನೆಗೆಲ್ ತಂಡವು 2-0 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ ದ್ವಿತಿಯಾರ್ಧದಲ್ಲಿ ಕಂಬ್ಯಾಕ್ ಮಾಡಿದ ಬೆಲ್ಜಿಯಂ ಪಡೆ ಎರಡು ಗೋಲು ದಾಖಲಿಸಿ 2-2 ಅಂತರದಿಂದ ಸಮಬಲ ಸಾಧಿಸಿದರು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚುವರಿ 30 ನಿಮಿಷಗಳನ್ನು ನೀಡಲಾಯಿತು.
117ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ನಾಯಕ ಯೂರಿ ಟೀಲೆಮನ್ಸ್ ಸೆನೆಗಲ್‌ನ ಪೆನಾಲ್ಟಿ ಬಾಕ್ಸ್‌ನೊಳಗೆ ನುಗ್ಗಿದರು. ಈ ವೇಳೆ ಸೆನೆಗಲ್‌ನ ಮಿಡ್‌ಫೀಲ್ಡರ್ ಲಮೈನ್ ಕಮರಾ ಹಿಂದಿನಿಂದ ಸ್ಲೈಡ್ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಟೀಲೆಮನ್ಸ್ ಬಿದ್ದರು.
ತಕ್ಷಣವೇ ಬೆಲ್ಜಿಯಂ ಆಟಗಾರರು ಪೆನಾಲ್ಟಿಗಾಗಿ ರೆಫರಿಗೆ ಮನವಿ ಮಾಡಿದ್ದಾರೆ. ಈ ವೇಳೆ ರೆಫರಿ ನೇರವಾಗಿ ಪೆನಾಲ್ಟಿ ನೀಡದೇ, ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಮರುಪರಿಶೀಲನೆಗೆ ಸೂಚಿಸಿದರು. ಸುದೀರ್ಘ ಪರಿಶೀಲನೆಯ ನಂತರ ರೆಫರಿ ಬೆಲ್ಜಿಯಂಗೆ ಪೆನಾಲ್ಟಿ ಕಿಕ್ ನೀಡಿದರು.
ಟೀಲೆಮನ್ಸ್ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ಪಂದ್ಯದ 124 ನಿಮಿಷ ಮತ್ತು 44 ಸೆಕೆಂಡುಗಳಲ್ಲಿ ಗೋಲು ಗಳಿಸಿದರು. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ತಡವಾಗಿ ದಾಖಲಾದ ಗೋಲು ಎಂಬ ಐತಿಹಾಸಿಕ ದಾಖಲೆ ಬರೆಯಿತು. ಈ ಮೂಲಕ ಬೆಲ್ಜಿಯಂ 3-2 ಅಂತರದಲ್ಲಿ ಜಯಗಳಿಸಿತು.
ಸಾಮಾನ್ಯವಾಗಿ ಫುಟ್‌ಬಾಲ್ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋದಾಗ ಒಟ್ಟು 120 ನಿಮಿಷಗಳ ಆಟವಿರುತ್ತದೆ. ಆದರೆ ಬೆಲ್ಜಿಯಂ ಮತ್ತು ಸೆನೆಗಲ್ ಪಂದ್ಯದಲ್ಲಿ ಇಷ್ಟು ದೊಡ್ಡ ಸಮಯದ ವಿಳಂಬ ಉಂಟಾಗಲು ಮತ್ತು ಈ ದಾಖಲೆ ಸೃಷ್ಟಿಯಾಗಲು ಮೈದಾನದಲ್ಲಿ ನಡೆದ ಪೆನಾಲ್ಟಿ ವಿವಾದ ಮತ್ತು ನಾಟಕೀಯ ಘಟನೆಗಳೇ ಕಾರಣ. ಈ ಕಾರಣದಿಂದಾಗಿ ಪೆನಾಲ್ಟಿ ಕಿಕ್ ಕೊಡಲು ತಡವಾಯಿತು. ಅದರಂತೆ ಟೀಲೆಮನ್ಸ್ 124ನೇ ನಿಮಿಷದಲ್ಲಿ ಗೋಲು ದಾಖಲಿಸಿ, ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ತಡವಾಗಿ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡರು.
ಪೆನಾಲ್ಟಿ ಪರ ವಾದ:
ಫಿಫಾದ ನಿಯಮಗಳ ಪ್ರಕಾರ, ಡಿಫೆಂಡರ್ ಒಬ್ಬರು ಎದುರಾಳಿ ಆಟಗಾರನನ್ನು ಟ್ಯಾಕಲ್ ಮಾಡುವಾಗ ಮೊದಲು ಚೆಂಡನ್ನು ಸ್ಪರ್ಶಿಸಬೇಕು. ಆದರೆ ಸ್ಲೋ-ಮೋಷನ್ ರೀಪ್ಲೇಗಳಲ್ಲಿ ಸೆನೆಗಲ್‌ನ ಕಮರಾ ಅವರ ಕಾಲು ಚೆಂಡನ್ನು ಮುಟ್ಟುವ ಮೊದಲೇ ಟೀಲೆಮನ್ಸ್ ಅವರ ಹಿಮ್ಮಡಿಗೆ ಬಲವಾಗಿ ತಗುಲಿರುವುದು ಸ್ಪಷ್ಟವಾಗಿ ಕಂಡಿದೆ.
ಆಟಗಾರನ ಹಿಂಬದಿಯಿಂದ ಬರುವ ಸ್ಲೈಡಿಂಗ್ ಚಾಲೆಂಜ್‌ಗಳು ಯಾವಾಗಲೂ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕಮರಾ ಹಿಂದಿನಿಂದ ಬಂದಿದ್ದರಿಂದ ಟೀಲೆಮನ್ಸ್ ನಿಯಂತ್ರಣ ತಪ್ಪಿ ಬೀಳಲು ಅದು ನೇರ ಕಾರಣವಾಯಿತು.
ಮೈದಾನದಲ್ಲಿ ರೆಫರಿ ಇದನ್ನು ಗಮನಿಸದಿದ್ದರೂ, VAR ತಂತ್ರಜ್ಞಾನವು ಯಾವುದೇ ಫೌಲ್ ಅನ್ನು ಸೂಕ್ಷ್ಮವಾಗಿ ಪತ್ತೆಹಚ್ಚುತ್ತದೆ. ತಾಂತ್ರಿಕವಾಗಿ ನಿಯಮ ಪುಸ್ತಕದ ಪ್ರಕಾರ ಬಾಕ್ಸ್ ಒಳಗಿನ ಇಂತಹ ದೈಹಿಕ ಸಂಪರ್ಕಕ್ಕೆ ಪೆನಾಲ್ಟಿ ನೀಡಲೇಬೇಕಾಗುತ್ತದೆ. ಅದರಂತೆ ಮ್ಯಾಚ್ ರೆಫರಿ ಪೆನಾಲ್ಟಿ ಕಿಕ್ ಅವಕಾಶ ನೀಡಿದ್ದಾರೆ.
ಪೆನಾಲ್ಟಿ ವಿರುದ್ಧ ವಾದ:
ರಾಯ್ ಕೀನ್ ಮತ್ತು ಗ್ಯಾರಿ ನೆವಿಲ್ಲೆ ಅವರಂತಹ ಪ್ರಮುಖ ಮಾಜಿ ಆಟಗಾರರ ಪ್ರಕಾರ, ಇದು ತೀರಾ ಸುಲಭವಾಗಿ ನೀಡಲಾದ ‘ಸಾಫ್ಟ್’ ಪೆನಾಲ್ಟಿ. ಟೀಲೆಮನ್ಸ್ ಅವರು ಕಮರಾ ಸ್ಲೈಡ್ ಮಾಡುವುದನ್ನು ಗಮನಿಸಿ, ಬೇಕೆಂದೇ ಅವರ ಕಾಲಿನ ಹಾದಿಗೆ ತಮ್ಮ ಕಾಲನ್ನು ಅಡ್ಡ ತಂದು ಬಿದ್ದರು.
ಪಂದ್ಯದ 120ನೇ ನಿಮಿಷದಲ್ಲಿ, ಅಂದರೆ ಇನ್ನು ಕೆಲವೇ ಸೆಕೆಂಡುಗಳಲ್ಲಿ ಪಂದ್ಯ ಮುಗಿಯುವಾಗ ಇಂತಹ ನಿರ್ಧಾರ ಇಡೀ ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ. ಇಂತಹ ಮಹತ್ವದ ಕ್ಷಣದಲ್ಲಿ ಆಟಗಾರ ಕೇವಲ ಬಿದ್ದ ತಕ್ಷಣ ಪೆನಾಲ್ಟಿ ನೀಡುವುದು ಸೆನೆಗಲ್ ತಂಡಕ್ಕೆ ಮಾಡಿದ ಅನ್ಯಾಯ ಎಂಬುದು ಕೆಲವರ ವಾದ.
ಇಲ್ಲಿ ಸೆನೆಗೆಲ್ ಆಟಗಾರ ಕಮರಾ ಅವರ ಉದ್ದೇಶ ಚೆಂಡನ್ನು ಕ್ಲಿಯರ್ ಮಾಡುವುದಾಗಿತ್ತೇ ಹೊರತು ಆಟಗಾರನನ್ನು ಬೀಳಿಸುವುದಾಗಿರಲಿಲ್ಲ. ಫುಟ್‌ಬಾಲ್‌ನಲ್ಲಿ ಇಂತಹ ಸಣ್ಣಪುಟ್ಟ ದೈಹಿಕ ಸಂಪರ್ಕಗಳು ಸಾಮಾನ್ಯ. ಹಾಗಾಗಿ ಇದನ್ನು ಫೌಲ್ ಎಂದು ಪರಿಗಣಿಸಬಾರದಿತ್ತು ಎಂಬ ವಾದವನ್ನು ಅನೇಕರು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ‘ಕಾರ್ಟೂನ್’ ಕಟ್ಟಿದ ಫುಟ್‌ಬಾಲ್ ತಂಡ: ಇದು ಜಪಾನಿನ ಕಾಲ್ಚೆಂಡು ಕಥೆ!
ಒಟ್ಟಾರೆಯಾಗಿ ಹೇಳುವುದಾದರೆ, ರೆಫರಿ ನಿರ್ಧಾರವು ತಾಂತ್ರಿಕವಾಗಿ ಮತ್ತು ನಿಯಮಗಳ ಪ್ರಕಾರ ಸರಿಯಾಗಿತ್ತು ಎನ್ನಬಹುದು. ಆದರೆ ಕ್ರೀಡಾ ಸ್ಫೂರ್ತಿ ಮತ್ತು ಪಂದ್ಯದ ರೋಚಕತೆಯ ದೃಷ್ಟಿಯಿಂದ ಇದು ವಿವಾದಾತ್ಮಕವಾಗಿ ಉಳಿಯಿತು. ಈ ಒಂದು ತೀರ್ಪು ಸೆನೆಗಲ್ ತಂಡದ ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದರೆ, ಬೆಲ್ಜಿಯಂ ತಂಡವು ಈ ಪೆನಾಲ್ಟಿ ಗೋಲಿನೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.
