ಹಿರಿಯೂರು ಬೈಎಲೆಕ್ಷನ್ ಅಖಾಡ ರಂಗು: ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್; ದಿವಂಗತ ಸುಧಾಕರ್ ಪುತ್ರನಿಗೆ ಟಿಕೆಟ್​​​ಗೆ ಒತ್ತಡ – Kannada News | JDS Strategy for Hiriyur By poll; Sudhakar Son’s Congress Ticket Demand Gains Momentum

ಹಿರಿಯೂರು ಜು. 2: ಮಾಜಿ ಸಚಿವ ಡಿ. ಸುಧಾಕರ್ ಅವರ ಹಠಾತ್ ನಿಧನದಿಂದ ತೆರವಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡ ಅಧಿಕೃತ ಘೋಷಣೆಗೂ ಮುನ್ನವೇ ಭರ್ಜರಿ ರಾಜಕೀಯ ಚಟುವಟಿಕೆಗಳನ್ನು ಶುರುವಾಗಿದೆ. ಒಂದೆಡೆ ಮೈತ್ರಿಕೂಟದ ಪರವಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೆರೆಮರೆಯ ಕೊನೆಹಂತದ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ದಿವಂಗತ ಸುಧಾಕರ್ ಅವರ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ತೀವ್ರಗೊಂಡಿದೆ. ಸಚಿವ ಸುಧಾಕರ್ ನಿಧನದಿಂದ ತೆರವಾದ ಹಿರಿಯೂರು ಕ್ಷೇತ್ರವನ್ನು ಈ ಬಾರಿ ಮೈತ್ರಿಕೂಟದ ಲೆಕ್ಕಾಚಾರದಲ್ಲಿ ಜೆಡಿಎಸ್ ತನ್ನದಾಗಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಶೀಘ್ರದಲ್ಲೇ ರಾಜ್ಯ ಬಿಜೆಪಿ ನಾಯಕರೊಂದಿಗೂ ಸಭೆ ನಡೆಸಿ ಜಂಟಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಿರಿಯೂರು ಕ್ಷೇತ್ರದ ಒಕ್ಕಲಿಗ ಮತ್ತು ಯಾದವ (ಗೊಲ್ಲ) ಸಮುದಾಯಗಳ ಮತಗಳ ಸಮೀಕರಣದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ, ಈ ಎರಡೂ ಸಮುದಾಯಗಳಲ್ಲಿ ಸಮಾನ ಪ್ರಭಾವ ಹೊಂದಿರುವ ಪ್ರಬಲ ನಾಯಕನಿಗೆ ಟಿಕೆಟ್ ನೀಡುವ ಸುಳಿವನ್ನು ಸ್ಥಳೀಯ ಜೆಡಿಎಸ್ ಮುಖಂಡರಿಗೆ ನೀಡಿದ್ದಾರೆ. ಈ ಕುರಿತು ನಾಳೆ (ಜು.3) ಹೆಚ್‌ಡಿಕೆ ಮಹತ್ವದ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್​​ ತಕರಾರು: ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್​​

ಸುಧಾಕರ್ ಪುತ್ರ ಸುಹಾಸ್ ಪರ ಕಾಂಗ್ರೆಸ್‌ನಲ್ಲಿ ಒತ್ತಡ:

ಇತ್ತ ಕಾಂಗ್ರೆಸ್ ಪಾಳಯದಲ್ಲೂ ಉಪಚುನಾವಣೆಯ ಟಿಕೆಟ್ ಫೈಟ್ ಜೋರಾಗಿದೆ. ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ನಿಧನದಿಂದಾಗಿ ಉಂಟಾಗಿರುವ ಅನುಕಂಪದ ಅಲೆಯನ್ನೇ ಬಂಡವಾಳ ಮಾಡಿಕೊಳ್ಳಲು ಬೆಂಬಲಿಗರು ಮುಂದಾಗಿದ್ದಾರೆ. ಸುಧಾಕರ್ ಅವರ ಪುತ್ರ ಸುಹಾಸ್ ಅವರಿಗೆ ಹಿರಿಯೂರು ಬೈಎಲೆಕ್ಷನ್ ಟಿಕೆಟ್ ನೀಡಬೇಕೆಂದು ಕ್ಷೇತ್ರದ ನೂರಾರು ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುಹಾಸ್ ಬೆಂಬಲಿಗರ ದಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಟಿಕೆಟ್‌ಗಾಗಿ ಆಗ್ರಹಿಸಲಿದೆ. ಉಪಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ಹಿರಿಯೂರಿನಲ್ಲಿ ರಾಜಕೀಯ ನಾಯಕರ ತೆರೆಮರೆಯ ಓಡಾಟ ಮತ್ತು ಒತ್ತಡದ ರಾಜಕಾರಣದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *