ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಕಳೆದ ಕೆಲ ವರ್ಷಗಳಿಂದ ಈ ಪ್ರಶ್ನೆಗೆ ಸಿಗುತ್ತಿದ್ದ ಉತ್ತರ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್. ಆದರೆ ಇಂದಿನಿಂದ ಈ ಉತ್ತರ ಬದಲಾಗಿದೆ. ಇನ್ಮುಂದೆ ಈ ಪ್ರಶ್ನೆಗೆ ಉತ್ತರ ಪವರ್ ಹಿಟ್ಟರ್ ಕೀರನ್ ಪೊಲಾರ್ಡ್ (Kieron Pollard). (PC: MI)
ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಕೀರನ್ ಪೊಲಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ. ಡಲ್ಲಾಸ್ನಲ್ಲಿ ನಡೆದ ಮೇಜರ್ ಲೀಗ್ ಟಿ20 ಟೂರ್ನಿಯ 5ನೇ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ವಿರುದ್ಧ ಪೊಲಾರ್ಡ್ 56 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಭರ್ಜರಿ ಶತಕ ಸಿಡಿಸಿದ್ದಾರೆ. (PC: MI)
ಈ ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಕಳೆದ ಕೆಲ ವರ್ಷಗಳಿಂದ ವಿಶ್ವ ದಾಖಲೆಯ ಸರದಾರನಾಗಿ ಮೆರೆಯುತ್ತಿದ್ದ ಗೇಲ್ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ್ದಾರೆ. (PC: MI)
ಟಿ20 ಕ್ರಿಕೆಟ್ನಲ್ಲಿ 455 ಇನಿಂಗ್ಸ್ ಆಡಿರುವ ಕ್ರಿಸ್ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆಯನ್ನು ಇದೀಗ ಪೊಲಾರ್ಡ್ ಮುರಿದ್ದಾರೆ. (PC: IPL)
ಟಿ20 ಕ್ರಿಕೆಟ್ನಲ್ಲಿ ಈವರೆಗೆ 653 ಇನಿಂಗ್ಸ್‌ಗಳನ್ನಾಡಿರುವ ಕೀರನ್ ಪೊಲಾರ್ಡ್ 2 ಭರ್ಜರಿ ಶತಕಗಳೊಂದಿಗೆ ಒಟ್ಟು 14,582 ರನ್ ಗಳಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಮುಂಬರುವ ಪಂದ್ಯಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 15 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪೊಲಾರ್ಡ್ ಪಾತ್ರರಾಗಲಿದ್ದಾರೆ. (PC: MI)
Published On – 12:25 pm, Sun, 21 June 26
