ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಸಿನಿಮಾ: ಪ್ರಧಾನಿ ಮೋದಿ ಅಭಿನಂದನೆ – Kannada News | Manipuri Language Indian movie Boong won prestigious BAFTA award

ಆಸ್ಕರ್ (Oscar) ಪ್ರಶಸ್ತಿಯಲ್ಲಿ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಸಿನಿಮಾ ನಾಮಿನೇಷನ್ ಹಂತ ತಲುಪಲು ವಿಫಲವಾಗಿತ್ತು. ಆದರೆ ಇದೀಗ ಸದ್ದೇ ಇಲ್ಲದೆ ಭಾರತೀಯ ಸಿನಿಮಾ ಒಂದು ಆಸ್ಕರ್​​ನಷ್ಟೆ ಪ್ರಮುಖವಾದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಿನಿಮಾಕ್ಕೆ ಸಿನಿಮಾದ ತಾಂತ್ರಿಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮಣಿಪುರಿ ಸಿನಿಮಾ ‘ಬೂಂಗ್’ ಸಿನಿಮಾ ಪ್ರತಿಷ್ಠಿತ ಭಾಫ್ಟಾ ಪ್ರಶಸ್ತಿ ಗೆದ್ದುಕೊಂಡಿದೆ. ಇತ್ತೀಚೆಗೆ ಆಂತರಿಕ ಸಂಘರ್ಷ, ಮಾನವ ಹಕ್ಕುಗಳ ಉಲ್ಲಂಘನೆ, ಹಿಂಸೆ ಇತ್ಯಾದಿಗಳ ಕಾರಣಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮಣಿಪುರದಿಂದ ಬಂದ ಸಿನಿಮಾ ಒಂದು ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದನ್ನು ಹಲವಾರು ಮಂದಿ ಗಣ್ಯರು ಅಭಿನಂದಿಸಿದ್ದಾರೆ. ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಬಾಫ್ಟಾ (BAFTA) ಪ್ರಶಸ್ತಿ ಸಮಾರಂಭದಲ್ಲಿ ‘ಅತ್ಯುತ್ತಮ ಮಕ್ಕಳ ಮತ್ತು ಕೌಟುಂಬಿಕ ಚಿತ್ರ’ ವಿಭಾಗದಲ್ಲಿ ‘ಬೂಂಗ್’ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಬೂಂಗ್ ಮಣಿಪುರಿ ಸಿನಿಮಾವನ್ನು ಲಕ್ಷ್ಮಿಪ್ರಿಯಾ ದೇವಿ ನಿರ್ದೇಶನ ಮಾಡಿದ್ದು, ವಿಶೇಷವೆಂದರೆ ಇದು ಅವರ ಮೊಟ್ಟ ಮೊದಲ ಸಿನಿಮಾ. ಸಿನಿಮಾ ನಿರ್ಮಾಣ ಮಾಡಿರುವುದು ಖ್ಯಾತ ಬಾಲಿವುಡ್ ನಟ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಜೊತೆಗೆ ರಿತೇಶ್ ಸಿಧ್ವಾನಿ, ವಿಕೇಶ್ ಭುತಾನಿ, ಅಲನ್ ಮೆಕ್ ಅಲೆಕ್ಸ್ ಮತ್ತು ಶುಜಾತ್ ಸೌದಾಗರ್ ಅವರುಗಳ ಸಹ ನಿರ್ಮಾಣ ತಂಡದಲ್ಲಿದ್ದಾರೆ. ಈ ಚಿತ್ರವು ಮಣಿಪುರದ ಶಾಲಾ ಬಾಲಕ ಬೂಂಗ್​​ನ ಸುತ್ತ ಸುತ್ತುತ್ತದೆ. ಜನಾಂಗೀಯ ಸಂಘರ್ಷ ಮತ್ತು ಗಡಿಭಾಗದ ಸವಾಲುಗಳ ನಡುವೆ, ತನ್ನ ಒಡೆದು ಹೋದ ಕುಟುಂಬವನ್ನು ಮತ್ತೆ ಒಂದುಗೂಡಿಸಲು ಆತ ನಡೆಸುವ ಸಾಹಸಮಯ ಮತ್ತು ಭಾವನಾತ್ಮಕ ಪ್ರಯಾಣವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ.

ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕಿ ಲಕ್ಷ್ಮಿಪ್ರಿಯಾ ದೇವಿ ಮಣಿಪುರದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಪ್ರಸ್ತಾಪಿಸಿದರು, ‘ಮಣಿಪುರದಲ್ಲಿ ಮತ್ತೆ ಶಾಂತಿ ನೆಲೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಸಂಘರ್ಷದಿಂದಾಗಿ ಮನೆ ಕಳೆದುಕೊಂಡ ಮಕ್ಕಳು ಮತ್ತು ಈ ಚಿತ್ರದಲ್ಲಿ ನಟಿಸಿದ ಬಾಲ ನಟರು ತಮ್ಮ ಬಾಲ್ಯದ ಸಂತೋಷ ಮತ್ತು ಕನಸುಗಳನ್ನು ಮತ್ತೆ ಕಂಡುಕೊಳ್ಳುವಂತಾಗಲಿ’ ಎಂದು ಶಾಂತಿಗಾಗಿ ಮನವಿ ಮಾಡಿದ ಅವರು, ‘ಕ್ಷಮೆ ಎಂಬುದು ಮನುಷ್ಯನಿಗಿರುವ ದೊಡ್ಡ ಶಕ್ತಿ, ಯಾವುದೇ ಸಂಘರ್ಷವೂ ಆ ಶಕ್ತಿಯನ್ನು ನಾಶಪಡಿಸಲು ಸಾಧ್ಯವಿಲ್ಲ’ ಎಂದರು.

ಇದನ್ನೂ ಓದಿ:ದಕ್ಷಿಣದ ಸಿನಿಮಾಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಪಾರ್ವತಿ ಮೆನನ್

‘ಬೂಂಗ್’ ಚಿತ್ರವು ಅಂತರಾಷ್ಟ್ರೀಯ ಮಟ್ಟದ ಜನಪ್ರಿಯ ಚಿತ್ರಗಳಾದ ‘ಝೂಟೋಪಿಯಾ 2’, ‘ಲಿಲೋ ಅಂಡ್ ಸ್ಟಿಚ್’ ಮತ್ತು ಫ್ರೆಂಚ್ ವೈಜ್ಞಾನಿಕ ಚಿತ್ರ ‘ಆರ್ಕೊ’ ಗಳೊಂದಿಗೆ ಪೈಪೋಟಿ ನಡೆಸಿ ಈ ಗೌರವಕ್ಕೆ ಪಾತ್ರವಾಗಿದೆ. ‘ಝೂಟೋಪಿಯಾ 2’ ಸಿನಿಮಾವು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 16 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಸಿರುವ ಭಾರಿ ಬಜೆಟ್ ಸಿನಿಮಾ, ಅಷ್ಟಾದರೂ ಬಹಳ ಸಣ್ಣ ಬಜೆಟ್​​ನ ‘ಬೂಂಗ್’ ಸಿನಿಮಾ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

‘ಬೂಂಗ್’ ಸಿನಿಮಾ ಮೊದಲು 2024ರ ಟೊರೊಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ನಂತರ ವಾರ್ಸಾ, ಮುಂಬೈ, ಗೋವಾ ಮತ್ತು ಮೆಲ್ಬೋರ್ನ್ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಗುಗುನ್ ಕಿಪ್ಜೆನ್, ಬಾಲಾ ಹಿಜಾಮ್ ನಿಂಗ್ಥೌಜಮ್ ಮತ್ತು ಅಂಗೋಮ್ ಸನಾಮತಮ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿಪುರದ ಮುಖ್ಯಮಂತ್ರಿಗಳು ಈ ಗೆಲುವನ್ನು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಹ ‘ಬೂಂಗ್’ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ‘ಈ ಸಿನಿಮಾದೊಂದಿಗೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ನಿಜಕ್ಕೂ ಅಪಾರ ಸಂತೋಷದ ಕ್ಷಣ, ಅದರಲ್ಲೂ ವಿಶೇಷವಾಗಿ ಮಣಿಪುರಕ್ಕೆ ಹೆಮ್ಮೆಯ ವಿಷಯ. ಇದು ನಮ್ಮ ದೇಶದಲ್ಲಿರುವ ಅಗಾಧ ಸೃಜನಶೀಲ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *