ಪ್ರಲ್ಹಾದ್ ಜೋಶಿ ಕುರಿತು ಸದನದಲ್ಲಿ ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು – Kannada News | Priyanka Gandhis Controversial Remarks On Pralhad Joshi in Parliament Session BJP demands apology

ನವದೆಹಲಿ, ಜುಲೈ 28: ಲೋಕಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ಮೋದಿ ಅವರು ಹೊಸ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿಯವರನ್ನು ಆಯ್ಕೆ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಅತ್ಯಾಚಾರಿಗಳ ಬಿಡುಗಡೆಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲಾಗಿದೆ. ಈ ನಿರ್ಧಾರದ ಮೂಲಕ ಪ್ರಧಾನಿಯವರು ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ನೀಡಿದ ಸಂದೇಶವೇನು? ಆ ಸಂದೇಶವು ಅತ್ಯಂತ ಸ್ಪಷ್ಟವಾಗಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರ್ಕಾರದ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದು ಸಾಬೀತಾಗಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.

ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದು ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿರುವ ಹೇಳಿಕೆಗಳು ‘ಚಾರಿತ್ರ್ಯ ವಧೆ’ಗೆ ಸಮನಾಗಿವೆ. ಅವರಿಂದ ಇಂತಹ ಭಾಷೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು. ಅವರು ಇಂತಹ ಭಾಷೆಯನ್ನು ಬಳಸಬಾರದು. ಅವರು ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಆ ಪಕ್ಷದ ಹಿರಿಯ ನಾಯಕಿಯಾಗಿದ್ದಾರೆ. ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಸದನದ ಘನತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ಸದನದ ಕ್ಷಮೆಯಾಚಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: ಹಾರ ಹಾಕಿ ಸನ್ಮಾನಿಸಲು ಧರ್ಮೇಂದ್ರ ಪ್ರಧಾನ್ ಪಾಕ್ ವಿರುದ್ಧ ಯುದ್ಧ ಗೆದ್ದು ಬಂದಿದ್ದಾರಾ?; ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಟೀಕೆ:

ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಸಾಕ್ಷಿಯನ್ನು ನೀಡುವಂತೆ ಬಿಜೆಪಿ ಒತ್ತಾಯಿಸಿತು. ಆಗ ಪ್ರಿಯಾಂಕಾ, ಆ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ ಎಂದು ಹೇಳಿದರು. ಕೊನೆಗೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಿಯಾಂಕಾ ಗಾಂಧಿಯ ಈ ಹೇಳಿಕೆಯನ್ನು ಸಂಸತ್ತಿನ ಕಲಾಪದಿಂದ ತೆಗೆದುಹಾಕಿದರು.

ಪ್ರಲ್ಹಾದ್ ಜೋಶಿ ಆಕ್ಷೇಪ:

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಮಾತನಾಡುವ ಮುನ್ನ ನೀವು ನಿಮ್ಮ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು” ಎಂದು ಹೇಳಿದ್ದಾರೆ. ಈ ಆರೋಪಗಳನ್ನು “ತಪ್ಪು ಮಾಹಿತಿ” ಎಂದು ತಳ್ಳಿಹಾಕಿರುವ ಪ್ರಲ್ಹಾದ್ ಜೋಶಿ, “ಸುಳ್ಳು ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನನ್ನ ವಿರುದ್ಧ ನೀಡಿದ ಸುಳ್ಳು ಹೇಳಿಕೆಗಾಗಿ ಪ್ರಿಯಾಂಕಾ ಗಾಂಧಿ ಕ್ಷಮೆಯಾಚಿಸಬೇಕು. ಅವರನ್ನು ಸಂಸತ್ತಿನಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರಧಾನ್ ಅವರನ್ನು ತೆಗೆದುಹಾಕಿ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿರಿ; ಸಂಸತ್​​ನಲ್ಲಿ ಅಖಿಲೇಶ್ ಯಾದವ್ ವ್ಯಂಗ್ಯ

ಮೋದಿ ಬಗ್ಗೆ ಪ್ರಿಯಾಂಕಾ ಲೇವಡಿ:

ಪ್ರಧಾನಿ ಮೋದಿಯವರ ‘ಇನ್‌ಸ್ಟಾಗ್ರಾಮ್ ರೀಲ್’ಗೆ ಪ್ರಿಯಾಂಕಾ ಗಾಂಧಿ ಟಾಂಗ್ ನೀಡಿದ್ದಾರೆ. ವಿದ್ಯಾರ್ಥಿ ಪ್ರತಿಭಟನೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ರೀಲ್ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವ್ಯಂಗ್ಯವಾಡಿದ್ದಾರೆ. “ಮಧ್ಯರಾತ್ರಿ ರೀಲ್ಸ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಪ್ರಧಾನಿಯವರು ಕ್ಯಾಮೆರಾದ ಆಂಗಲ್ ಬದಲಾಯಿಸುವ ಬದಲು ತಮ್ಮ ಮನಸ್ಸಿನ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Tue, 28 July 26

Source link

Leave a Reply

Your email address will not be published. Required fields are marked *