ವಿಶ್ವದ ಟಾಪ್ ಸಿನಿಮಾ ನಿರ್ದೇಶಕನಿಗೆ ಭಾರತದ ಈ ನಿರ್ದೇಶಕ ಅಚ್ಚು-ಮೆಚ್ಚು – Kannada News | Christopher Nolan Gives talks about India director Satyajit Ray

ಕ್ರಿಸ್ಟೊಫರ್ ನೋಲನ್, ಹಾಲಿವುಡ್​​ನ (Hollywood) ಸೂಪರ್ ಸ್ಟಾರ್ ನಟರನ್ನೂ ಮೀರಿಸಬಹುದಾದ ಅಪ್ಪಟ ಅಭಿಮಾನಿಗಳನ್ನು ಹೊಂದಿರುವ ನಿರ್ದೇಶಕ. ಹಾಲಿವುಡ್​​ನಲ್ಲಿ ಫ್ರಾಂಚೈಸ್ ಅಭಿಮಾನಿಗಳು ಬಹಳ ಹೆಚ್ಚು. ಅಂದರೆ ‘ಸ್ಪೈಡರ್ ಮ್ಯಾನ್’ ಅಭಿಮಾನಿಗಳು, ‘ಸೂಪರ್ ಮ್ಯಾನ್’ ಅಭಿಮಾನಿಗಳು, ‘ಮಿಷನ್ ಇಂಪಾಸಿಬಲ್’ ಅಭಿಮಾನಿಗಳು, ‘ಫಾಸ್ಟ್ ಆಂಡ್ ಫ್ಯೂರಿಯಸ್’ ಅಭಿಮಾನಿಗಳು ಹೀಗೆ. ಆದರೆ ಒಬ್ಬ ನಿರ್ದೇಶಕ ಯಾವುದೇ ರೀತಿಯ ಸಿನಿಮಾ ಮಾಡಿದರೂ ನೋಡಲು ವರ್ಷಗಳ ಗಟ್ಟಲೆ ಕಾದು ಕೂರುತ್ತಾರೆಂದರೆ ಅದು ಕ್ರಿಸ್ಟೊಫರ್ ನೋಲನ್​​ಗೆ ಮಾತ್ರ. ತಮ್ಮ ಭಿನ್ನ ನಿರೂಪಣಾ ಶೈಲಿಯಿಂದಲೇ ವಿಶ್ವದಾದ್ಯಂತ ನೂರಾರು ಕೋಟಿ ಅಭಿಮಾನಿಗಳನ್ನು ಗಳಿಸಿರುವ ಕ್ರಿಸ್ಟೊಫರ್ ನೋಲನ್​​ಗೆ ಭಾರತದ ನಿರ್ದೇಶಕರೊಬ್ಬರು ಅಚ್ಚುಮೆಚ್ಚು.

ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ತಿಂಗಳಾನುಗಟ್ಟಲೆ ಮುಂಗಡ ಬುಕಿಂಗ್ ಆಗಿದೆ ಈ ಸಿನಿಮಾ. ಬೆಂಗಳೂರಿನಲ್ಲಿ ಸಹ ಕೋರಮಂಗಲ ಐಮ್ಯಾಕ್ಸ್​​ನಲ್ಲಿ ಕಳೆದೊಂದು ವಾರದಿಂದಲೂ ಹೌಸ್​​ಫುಲ್ ಆಗುತ್ತಿರುವುದು ಮಾತ್ರವಲ್ಲ, ಮುಂದಿನ ಒಂದು ವಾರಕ್ಕೂ ಮುಂಗಡ ಬುಕಿಂಗ್ ಆಗಿ ಹೋಗಿದೆ. ಇಂಥಹಾ ನಿರ್ದೇಶಕ, ಭಾರತದ ಸಿನಿಮಾ ನಿರ್ದೇಶಕರೊಬ್ಬರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ ಕ್ರಿಸ್ಟೊಫರ್ ನೋಲನ್ ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ‘ಕ್ರೈಟೇರಿಯನ್ ಕ್ಲೋಸೆಟ್’ ಭೇಟಿ ನೀಡಿದ್ದರು. ಅಲ್ಲಿನ ಸಿನಿಮಾ ಸಂಗ್ರಹದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಭಾರತೀಯ ಸಿನಿಮಾ ಸರಣಿ ‘ದಿ ಅಪು ಟ್ರಿಲಜಿ’ಯನ್ನು ಕೈಗೆತ್ತಿಕೊಂಡು, ತಾವು ಮನೆಗೆ ಕೊಂಡೊಯ್ಯಲು ಬಯಸುವ ಚಲನಚಿತ್ರಗಳಲ್ಲಿ ‘ದಿ ಅಪು ಟ್ರೈಲಜಿ’ಯನ್ನು ಒಂದನ್ನಾಗಿ ಆಯ್ಕೆ ಮಾಡಿಕೊಂಡರು ಮತ್ತು ಅದರ ನಿರ್ದೇಶಕ ಸತ್ಯಜಿತ್ ರೇ ತಮ್ಮ ಮೇಲೆ ಬೀರಿರುವ ಪ್ರಭಾವದ ಬಗ್ಗೆಯೂ ಅವರು ಮಾತನಾಡಿದರು.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

‘ಕ್ರೈಟೇರಿಯನ್ ಕ್ಲೋಸೆಟ್’ ಪ್ರಪಂಚದಾದ್ಯಂತದ 1,000 ಕ್ಕೂ ಹೆಚ್ಚು ಶ್ರೇಷ್ಠ ಚಲನಚಿತ್ರಗಳ ಸಂಗ್ರಹವನ್ನು ಹೊಂದಿದೆ. ಚಲನಚಿತ್ರ ನಿರ್ದೇಶಕರು, ನಟರು ಮತ್ತು ಕಲಾವಿದರು ಈ ಸಂಗ್ರಹವನ್ನು ವೀಕ್ಷಿಸಲು ಮತ್ತು ತಮ್ಮ ಮೇಲೆ ಪ್ರಭಾವ ಬೀರಿದ ಚಲನಚಿತ್ರಗಳ ಕುರಿತು ಮಾತನಾಡಲು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

‘ಕ್ರೈಟೇರಿಯನ್ ಕಲೆಕ್ಷನ್’ ಖುದ್ದು ಕ್ರಿಸ್ಟೊಫರ್ ಅವರ ವೀಡಿಯೊ ಅನ್ನು ಹಂಚಿಕೊಂಡಿದ್ದು, ನೊಲನ್ ಅವರು ಶೆಲ್ಫ್‌ಗಳನ್ನು ಪರಿಶೀಲಿಸುತ್ತಾ ಬಂದು ಅಂತಿಮವಾಗಿ ‘ದಿ ಅಪು ಟ್ರೈಲಜಿ’ ಬಳಿ ನಿಲ್ಲುತ್ತಾರೆ. ಆ ಚಲನಚಿತ್ರಗಳ ಬಗ್ಗೆ ಮಾತನಾಡುತ್ತಾ ಅವರು, ‘ಭಾರತದ ಅತ್ಯಂತ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ಅವರ ‘ಅಪು ಟ್ರೈಲಜಿ’ ಇದೆ. ಈ ತ್ರಿವಳಿ ಚಿತ್ರಗಳು ‘ಪಥೇರ್ ಪಾಂಚಾಲಿ’ಯೊಂದಿಗೆ ಪ್ರಾರಂಭವಾಗುತ್ತವೆ, ಇದು ಅತ್ಯದ್ಭುತ ಚಿತ್ರ. ಇದು ನನ್ನ ಮನಸ್ಸನ್ನು ಬೆರಗುಗೊಳಿಸಿತ್ತು. ನಾನು ಈ ಟ್ರೈಲಜಿಯ ಎರಡು ಮತ್ತು ಮೂರನೇ ಭಾಗಗಳನ್ನು ಇನ್ನೂ ನೋಡಿಲ್ಲ, ಹಾಗಾಗಿ ಇದನ್ನು ಪಡೆದುಕೊಂಡು ಕಥೆಯನ್ನು ಪೂರ್ಣಗೊಳಿಸಲು ನಾನು ತುಂಬ ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ಸತ್ಯಜಿತ್ ರೇ, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ. ಜೀವಮಾನ ಸಾಧನೆಗೆ ಆಸ್ಕರ್ ಪಡೆದ ಏಕೈಕ ಭಾರತೀಯ ನಿರ್ದೇಶಕ. ಅವರು ಹಾಲಿವುಡ್​ನ ಹಲವು ಹೆಸರಾಂತ ಸಿನಿಮಾ ನಿರ್ದೇಶಕರ ಮೇಲೆ ಪ್ರಭಾವ ಬೀರಿದ್ದಾರೆ. ಹಾಲಿವುಡ್​​ನ ಟಾಪ್ ನಿರ್ದೇಶಕ ಎನಿಸಿಕೊಳ್ಳುವ, ಹಲವು ಆಸ್ಕರ್ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿರುವ ಮಾರ್ಟಿನ್ ಸ್ಕೊರ್ಸೆಸಿ ಸಹ ವಿದ್ಯಾರ್ಥಿ ದೆಸೆಯಲ್ಲೇ ಸತ್ಯಜಿತ್ ರೇ ಅವರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗ ಕ್ರಿಸ್ಟೊಫರ್ ನೋಲನ್ ಸಹ ತಾವು ಸತ್ಯಜಿತ್ ರೇ ಸಿನಿಮಾಗಳ ಅಭಿಮಾನಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *