ಟೀಮ್ ಇಂಡಿಯಾದ ಏಕದಿನ ವಿಶ್ವಕಪ್ (ODI World Cup 2027) ತಯಾರಿ ಇಂದಿನಿಂದ (ಜೂನ್ 13) ಶುರುವಾಗಲಿದೆ. ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯೊಂದಿಗೆ ಭಾರತ ತಂಡ ವಿಶ್ವಕಪ್ ಸಿದ್ಧತೆ ಆರಂಭವಾಗುತ್ತಿದ್ದು, ಈ ಸರಣಿಯ ಬಳಿಕ ಟೀಮ್ ಇಂಡಿಯಾ ಒಟ್ಟು 24 ಪಂದ್ಯಗಳನ್ನಾಡಲಿದೆ. ಅಂದರೆ 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಒಟ್ಟು 27 ಒನ್ಡೇ ಮ್ಯಾಚ್ಗಳಲ್ಲಿ ಕಣಕ್ಕಿಳಿಯಲಿದೆ.
ಯಾರ ವಿರುದ್ಧ 27 ಪಂದ್ಯಗಳು?
ಭಾರತ ತಂಡವು 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಒಟ್ಟು 27 ಏಕದಿನ ಪಂದ್ಯಗಳನ್ನು (ODIs) ಆಡಲಿದೆ. ಐಸಿಸಿ (ICC) ಭವಿಷ್ಯದ ಪ್ರವಾಸ ಯೋಜನೆ (FTP) ಹಾಗೂ BCCI ಪ್ರಕಟಿಸಿರುವ ಅಧಿಕೃತ ವೇಳಾಪಟ್ಟಿಯ ಪ್ರಕಾರ ಈ ಪಂದ್ಯಗಳು ನಿಗದಿಯಾಗಿವೆ.
ವಿಶ್ವಕಪ್ ಸಿದ್ಧತೆಯ ಭಾಗವಾಗಿ ಭಾರತ ತಂಡವು ಯಾವೆಲ್ಲಾ ದೇಶಗಳ ವಿರುದ್ಧ ಎಷ್ಟು ಏಕದಿನ ಪಂದ್ಯಗಳನ್ನು ಆಡಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ:
- ಅಫ್ಘಾನಿಸ್ತಾನ್: ಜೂನ್ 13 ರಿಂದ ಶುರುವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನಾಡಲಿದೆ.
- ಇಂಗ್ಲೆಂಡ್: ಜುಲೈ 2026 ರಲ್ಲಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಿದೆ.
- ವೆಸ್ಟ್ ಇಂಡೀಸ್: ಸೆಪ್ಟೆಂಬರ್-ಅಕ್ಟೋಬರ್ 2026 ರಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಪ್ರವಾಸ ಬರಲಿದ್ದು, ತವರಿನಲ್ಲಿ 3 ಪಂದ್ಯಗಳು ನಡೆಯಲಿವೆ.
- ನ್ಯೂಝಿಲೆಂಡ್: ಅಕ್ಟೋಬರ್-ನವೆಂಬರ್ 2026 ರಲ್ಲಿ ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತ ತಂಡವು 5 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
- ಶ್ರೀಲಂಕಾ: ಡಿಸೆಂಬರ್ 2026 ರಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಭಾರತದಲ್ಲಿ 3 ಪಂದ್ಯಗಳು ನಡೆಯಲಿವೆ.
- ಝಿಂಬಾಬ್ವೆ: ಜನವರಿ 2027 ರ ಆರಂಭದಲ್ಲಿ ಝಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನಾಡಲಿದೆ.
- ಏಷ್ಯಾ ಕಪ್: 2027ರ ಮಧ್ಯಭಾಗದಲ್ಲಿ (ವಿಶ್ವಕಪ್‌ಗೂ ಮುನ್ನ) ಏಕದಿನ ಮಾದರಿಯ ಏಷ್ಯಾ ಕಪ್ ಟೂರ್ನಿ ನಡೆಯಲಿದ್ದು, ಭಾರತ ಫೈನಲ್ ತಲುಪಿದರೆ ಕನಿಷ್ಠ 7 ಪಂದ್ಯಗಳನ್ನು ಆಡಲಿದೆ.
ಈ ಸರಣಿ ಮತ್ತು ಟೂರ್ನಿಗಳ ಮೂಲಕ ಟೀಮ್ ಇಂಡಿಯಾ ಒಟ್ಟು 27 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಅಕ್ಟೋಬರ್ 2027 ರಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ ವಿಶ್ವಕಪ್‌ಗೆ ಸಂಪೂರ್ಣವಾಗಿ ಸಜ್ಜಾಗಲಿದೆ.
ಇದನ್ನೂ ಓದಿ: ಯುದ್ಧದ ನಡುವೆ ಫಿಫಾ ವಿಶ್ವಕಪ್‌ಗೆ ಇರಾನ್ ಎಂಟ್ರಿ..!
ಭಾರತ vs ಅಫ್ಘಾನಿಸ್ತಾನ್ ಏಕದಿನ ಸರಣಿ ವೇಳಾಪಟ್ಟಿ:
- ಮೊದಲ ಏಕದಿನ ಪಂದ್ಯ: ಜೂನ್ 13 – ಧರ್ಮಶಾಲಾ.
- ಎರಡನೇ ಏಕದಿನ ಪಂದ್ಯ: ಜೂನ್ 17 – ಲಕ್ನೋ.
- ಮೂರನೇ ಏಕದಿನ ಪಂದ್ಯ: ಜೂನ್ 20 – ಚೆನ್ನೈ.
ಭಾರತ ಏಕದಿನ ತಂಡ
ಶುಭ್ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.
