ಆರೋಪಿಗಳಾದ ಸಿದ್ಧೀಕ್ ಹಾಗೂ ನಾಗಲಕ್ಷ್ಮೀImage Credit source: tv9
ಹಾಸನ, ಫೆಬ್ರವರಿ 18: ಬಡ ಹಾಗೂ ಅಸಹಾಯಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ (Honey Trap) ಮೂಲಕ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಹಾಸನದ (Hassan) ಹೊಳೆನರಸೀಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆ ನಾಗಲಕ್ಷ್ಮೀ, ಆಕೆಯ ಪತಿ ಸಿದ್ಧೀಕ್ ಹಾಗೂ ಪ್ರೈವೇಟ್ ಲ್ಯಾಬ್ ಟೆಕ್ನಿಷಿಯನ್ ಧರ್ಮರಾಜು ಅಲಿಯಾಸ್ ಫಣಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಡ ಹಾಗೂ ಅಸಹಾಯಕ ಮಹಿಳೆಯರನ್ನು ಮುಂದಿಟ್ಟುಕೊಂಡು ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಇವರ ಮೇಲಿದ್ದು, ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯೆ ಪರಿಚಯಸ್ಥನ ಮೇಲೆಯೇ ಅತ್ಯಾಚಾರ ಕೇಸ್ ದಾಖಲಿಸಲು ಬಲವಂತ
ಫೆಬ್ರವರಿ 13ರಂದು ಸಂತ್ರಸ್ತ ಮಹಿಳೆಯ ಮನೆಗೆ ಪರಿಚಯಸ್ಥ ವ್ಯಕ್ತಿಯೊಬ್ಬರು ಬಂದಿದ್ದರು. ಆ ವೇಳೆ, ಮತ್ತೊಬ್ಬ ಮಹಿಳೆ ಆತ ಸಂತ್ರಸ್ತೆ ಜತೆ ಇರುವ ಆತನ ಫೋಟೋ ತೆಗೆದು ನಾಗಲಕ್ಷ್ಮಿಗೆ ಕಳುಹಿಸಿದ್ದಳು ಎನ್ನಲಾಗಿದೆ. ನಂತರ ಇದೇ ವಿಚಾರವನ್ನು ನೆಪ ಮಾಡಿಕೊಂಡು ನಾಗಲಕ್ಷ್ಮೀ ಮತ್ತು ಆಕೆಯ ತಂಡ ಮನೆಗೆ ಬಂದು, ಪರಿಚಯಸ್ಥನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಗೆ ಒತ್ತಾಯ ಮಾಡಿತ್ತು ಎಂಬುದು ತಿಳಿದುಬಂದಿದೆ.
ಬಲವಂತವಾಗಿ ಖಾಸಗಿ ಅಂಗಾಂಗ ಮುಟ್ಟಿ ತಪಾಸಣೆ
ರೇಪ್ ಕೇಸ್ ದಾಖಲಿಸಲು ಮಹಿಳೆ ಒಪ್ಪದ ಹಿನ್ನೆಲೆಯಲ್ಲಿ, ಹೊಳೆನರಸೀಪುರದಲ್ಲೇ ಲ್ಯಾಬ್ ನಡೆಸುತ್ತಿದ್ದ ಫಣಿಯನ್ನು ಆರೋಪಿಗಳು ಮನೆಗೆ ಕರೆಸಿಕೊಂಡಿದ್ದಾರೆ. ಆತ ಬಲವಂತವಾಗಿ ಸಂತ್ರಸ್ತೆಯ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಾ ಮೆಡಿಕಲ್ ಪರೀಕ್ಷೆ ನಡೆಸಿದ ಆರೋಪ ಕೇಳಿಬಂದಿದೆ. ಬಳಿಕ, ‘ನಿನ್ನ ವಿರುದ್ಧ ಸಾಕ್ಷ್ಯ ಇದೆ, ಪ್ರಕರಣ ಕೊಡದಿದ್ದರೆ ಗಂಡನಿಗೆ ವಿಷಯ ಹೇಳುತ್ತೇವೆ’ ಎಂದು ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಸಾಂತ್ವನ ಕೇಂದ್ರಕ್ಕೆ ಕಳುಹಿಸಿದಾಗ ರಟ್ಟಾಯ್ತು ಗುಟ್ಟು
ಫೆಬ್ರವರಿ 15ರಂದು ಸಂತ್ರಸ್ತೆಯನ್ನು ಆರೋಪಿಗಳು ಬಲವಂತವಾಗಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಆದರೂ ಮಹಿಳೆ ದೂರು ನೀಡಲು ಹಿಂದೇಟು ಹಾಕಿ ಕಣ್ಣೀರಿಟ್ಟಿದ್ದಳು. ಅನುಮಾನಗೊಂಡ ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ದಂಧೆ ಸಂಪೂರ್ಣವಾಗಿ ಬಯಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅರೆಕಾಲಿಕ ಉಪನ್ಯಾಸಕಿಯೇ ಕಿಂಗ್ಪಿನ್!
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಾಗಲಕ್ಷ್ಮೀ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದು, ಈ ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಆಕೆಯ ಹೆಸರು ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. ನಾಗಲಕ್ಷ್ಮೀ ಮತ್ತು ತಂಡ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ದಂಧೆ ನಡೆಸುತ್ತಿತ್ತು ಎನ್ನುವ ಮಾಹಿತಿ ದೊರೆತಿದೆ.
ಪತಿ ಅಂದ್ರೆ ಒಲ್ಲೆ, ಪ್ರಿಯಕರನ ಜೊತೆ ಲಲ್ಲೆ! ಗಂಡನಿಂದ ದೂರವಾಗಲು ಅತ್ಯಾಚಾರದ ರೀತಿ ಕಥೆ ಕಟ್ಟಿದ್ದ ಖತರ್ನಾಕ್ ಲೇಡಿ
ಸದ್ಯ ಹೊಳೆನರಸೀಪುರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಇನ್ನೂ ಹೆಚ್ಚಿನ ಮಹಿಳೆಯರು ದೂರು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
