ಕೊಪ್ಪಳ, ಜುಲೈ 29: ಬಲ್ಡೋಟಾ ಕಾರ್ಖಾನೆ (Baldota Factory) ಆವರಣದಲ್ಲಿರವ ಕೆರೆ (lake) ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ರೈತ ಹುತಾತ್ಮ ದಿನಾಚರಣೆ ವೇಳೆ ಧ್ವಂಸಗೊಂಡಿದ್ದ ಕಾರ್ಖಾನೆಯ ಗೇಟ್ ಮತ್ತು ಕಾಂಪೌಂಡ್ ಅನ್ನು ಆಡಳಿತ ಮಂಡಳಿ ರಾತ್ರೋರಾತ್ರಿ ಮರುನಿರ್ಮಾಣ ಮಾಡಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಯನ್ನು ಸಾರ್ವಜನಿಕರಿಗೆ ನೀಡದಿದ್ದರೆ ಮತ್ತೆ ಗೇಟ್ ಒಡೆಯುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಬಲ್ಡೋಟಾ ಕಾರ್ಖಾನೆ ಆವರಣದಲ್ಲಿರವ ಕೆರೆ ವಿವಾದ: ಉದ್ವಿಗ್ನ ವಾತಾವರಣ
ಕೊಪ್ಪಳ ತಾಲೂಕಿನ ಬಸಾಪೂರ ಬಳಿಯಿರುವ ಬಲ್ಡೋಟಾ ಕಾರ್ಖಾನೆ ಆವರಣದ ಕೆರೆ ವಿಚಾರಕ್ಕೆ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರೈತ ಹುತಾತ್ಮ ದಿನಾಚರಣೆ ವೇಳೆ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದ ಕಾರ್ಖಾನೆಯ ಮುಖ್ಯ ಗೇಟ್ ಹಾಗೂ ಕಾಂಪೌಂಡ್ ಅನ್ನು ಆಡಳಿತ ಮಂಡಳಿ ರಾತ್ರೋರಾತ್ರಿ ಮರುನಿರ್ಮಾಣ ಮಾಡಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ: ಬೃಹತ್ ಪ್ರತಿಭಟನೆ
ಈ ಬೆಳವಣಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ಕೆರೆಯನ್ನು ಸಾರ್ವಜನಿಕರ ಬಳಕೆಗೆ ಮರಳಿ ನೀಡದಿದ್ದರೆ ಮತ್ತೊಮ್ಮೆ ಗೇಟ್ ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆರೆ ಉಳಿವಿಗಾಗಿ ರೈತರ ಹೋರಾಟ ಮುಂದುವರಿದಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.
ಕೆರೆಗಾಗಿ ಹೋರಾಟ
ಸುಮಾರು 54 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿಸ್ತರಣೆಯಾಗ್ತಿರೋ ಕಾರ್ಖಾನೆಗೆ ಹೆಚ್ಚು ಕಡಿಮೆ ಕಳೆದ ಎರಡು ವರ್ಷದಿಂದ ವಿರೋಧ ಇದೆ. ಇನ್ನು ಕಾರ್ಖಾನೆ ಆವರಣದಲ್ಲಿರುವ ಕೆರೆಗಾಗಿ ಕಳೆದ ಎರಡು ತಿಂಗಳಿಂದ ಹೋರಾಟ ನಡೆಯುತ್ತಿದೆ. ಈ ಬೆಳವಣಿಗೆ ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಾರ್ಖಾನೆ ಆಡಳಿತ ತಮ್ಮ ಹೋರಾಟವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರೈತ ಮುಖಂಡ ಭೀಮಸೇನ್ ಕಲಕೇರಿ ಹೇಳಿದ್ದಿಷ್ಟು
‘‘ಕೆರೆ ಸಾರ್ವಜನಿಕ ಆಸ್ತಿಯಾಗಿದ್ದು, ರೈತರು ಮತ್ತು ಗ್ರಾಮಸ್ಥರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬುದು ಪ್ರತಿಭಟನಾಕಾರರ ವಾದ. ಕೆರೆಯನ್ನು ಸಾರ್ವಜನಿಕರಿಗೆ ಮರಳಿ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ’’ ಎಂದು ರೈತ ಮುಖಂಡ ಭೀಮಸೇನ್ ಕಲಕೇರಿ ಹೇಳಿದ್ದಾರೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಬಲ್ಡೋಟಾ ಹೋರಾಟದ ಕಿಚ್ಚು, ಕಬ್ಬಿಣದ ಬಾಗಿಲು ಮುರಿದು ಕಾರ್ಖಾನೆಗೆ ನುಗ್ಗಿದ ರೈತರು
ಬಲ್ಡೋಟಾ ಕಾರ್ಖಾನೆ ಆವರಣದಲ್ಲಿರುವ ಕೆರೆ ವಿಚಾರ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಒಂದೆಡೆ ಕಾರ್ಖಾನೆ ಆಡಳಿತ ಗೇಟ್ ಮತ್ತು ಕಾಂಪೌಂಡ್ ಮರುನಿರ್ಮಾಣ ಮಾಡಿದ್ದರೆ, ಮತ್ತೊಂದೆಡೆ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಮುಂದೆ ರೈತರ ಹೋರಾಟ ಯಾವ ಹಂತಕ್ಕೆ ತಲುಪತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
