ಬೆಂಗಳೂರು, ಜುಲೈ 26: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ (BMTC Bus) ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ (Inappropriate Behavior) ವರ್ತಿಸಿದ್ದಾನೆ. ಕಿರುಕುಳ ನೀಡಿದ ಆಸಾಮಿಗೆ ಯುವತಿ ಮತ್ತು ಚಾಲಕ ಥಳಿಸಿದ್ದರು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲೇನಿದೆ?
ಜುಲೈ 24ರ ಮಧ್ಯಾಹ್ನ ಸುಮಾರು 12:42ರ ಸಮಯದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ
ಪರಿಶೀಲನೆಯ ವೇಳೆ ಈ ಕೃತ್ಯವು ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರ ರಿಂಗ್ ರಸ್ತೆಯ ಮಾನ್ಯತಾ ಟೆಕ್ ಪಾರ್ಕ್ ಬಸ್ ನಿಲ್ದಾಣದ ಹತ್ತಿರ ನಡೆದಿರುವುದು ತಿಳಿದುಬಂದಿದೆ. ಸಾರ್ವಜನಿಕ ಸ್ಥಳವಾದ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಅಪರಿಚಿತ ವ್ಯಕ್ತಿಯ ಬಗ್ಗೆ ಎಲ್ಲೆಡೆ ಮಾಹಿತಿ ಸಂಗ್ರಹಿಸಲು ಯತ್ನಿಸಲಾಗಿದೆಯಾದರೂ, ಸದ್ಯಕ್ಕೆ ಆತನ ಸುಳಿವು ಲಭ್ಯವಾಗಿಲ್ಲ. ಹೀಗಾಗಿ, ಮಹಿಳೆಗೆ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.
ನಡೆದಿದ್ದೇನು?
ಜುಲೈ 24ರಂದು ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ತೆರಳುತ್ತಿದ್ದ ಬಸ್ಗೆ ಹತ್ತಿದ ವ್ಯಕ್ತಿಯೊಬ್ಬ, ಮಹಿಳೆಯರಿಗೆ ಉದ್ದೇಶಪೂರ್ವಕವಾಗಿ ಮೈ-ಕೈ ಮುಟ್ಟಿರುವ ಆರೋಪ ಕೇಳಿ ಬಂದಿತ್ತು. ಆತನ ವರ್ತನೆ ಮಿತಿಮೀರುತ್ತಿದ್ದಂತೆ ಯುವತಿ ಕೂಡಲೇ ಬಸ್ ಚಾಲಕನ ಗಮನಕ್ಕೆ ತಂದಿದ್ದಾಳೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಕೊರಳಪಟ್ಟಿ ಹಿಡಿದೆಳೆದು ಕಪಾಳಕ್ಕೆ ಬಾರಿಸಿದ್ದಳು. ಅರೆಬೆತ್ತಲಾದ ಆತನಿಗೆ ಬಸ್ ಚಾಲಕ ಕೂಡ ಗೂಸಾ ನೀಡಿದ್ದ. ಬಳಿಕ ಬಸ್ನಿಂದ ಆತ ಎಸ್ಕೇಪ್ ಆಗಿದ್ದ. ಇನ್ನು ಈ ದೃಶ್ಯವನ್ನ ಯುವತಿ ಸೋಶಿಯಲ್ ಮೀಡಿಯಾಗೆ ಹಾಕಿದ್ದು, ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ: ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್
ಮತ್ತೊಂದು ವಿಷಯ ಏನಂದರೆ ಆರೋಪಿ ವ್ಯಕ್ತಿ ಇದೇ ರೀತಿ ಹಲವು ಸಲ ಕಾಟ ಕೊಟ್ಟಿದ್ದಾನೆ. ಮಹಿಳೆಯರ ಸೀಟ್ನಲ್ಲಿ ಕುಳಿತುಕೊಳ್ಳುವುದು, ಮುಂದಿನ ಬಾಗಿಲಿನಿಂದ ಬಸ್ ಹತ್ತೋದು, ರಶ್ ಇದ್ದಾಗ ಅಸಭ್ಯವಾಗಿ ವರ್ತಿಸ್ತಿದ್ನಂತೆ. ಆದರೆ ಈ ಸಲ ಮಹಿಳೆ ಧೈರ್ಯದಿಂದ ಆತನಿಗೆ ತಕ್ಕ ಪಾಠ ಕಲಿಸಿದ್ದಳು.
ವರದಿ: ನಟರಾಜ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
