ಸೂರ್ಯ (Suriya), ತ್ರಿಷಾ ಕೃಷ್ಣನ್ (Trisha Krishnan) ನಟನೆಯ ಬಹುನಿರೀಕ್ಷಿತ ‘ಕರುಪ್ಪು’ ಸಿನಿಮಾ ಇಂದು (ಮೇ 14) ಬಿಡುಗಡೆ ಆಗಬೇಕಿತ್ತು. ಸೂರ್ಯ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಲು ಕಾದಿದ್ದರು, ಆದರೆ ಸಿನಿಮಾ ಬಿಡುಗಡೆ ಆಗಲಿಲ್ಲ. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಸಿನಿಮಾ ಬಿಡುಗಡೆ ವಿಳಂಬ ಆಗಿದೆ. ಚಿತ್ರತಂಡವು ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿತ್ತು. ಮತ್ತು ಉಳಿದ ಪ್ರದರ್ಶನಗಳು ನಿಗದಿತ ಸಮಯಕ್ಕೆ ನಡೆಯಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಳಿಕ ಮಧ್ಯಾಹ್ನದ ಪ್ರದರ್ಶನಗಳು ಕೂಡ ರದ್ದಾದವು. ಇದು ಅಭಿಮಾನಿಗಳನ್ನು ಕೆರಳಿಸಿತು, ಚಿತ್ರತಂಡದ ವಿರುದ್ಧ ಟೀಕೆ ಸಹ ವ್ಯಕ್ತವಾಯ್ತು. ಇದೀಗ ಸಿನಿಮಾದ ನಿರ್ದೇಶಕ ಆರ್ಜೆ ಬಾಲಾಜಿ ಸಿನಿಮಾ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಜೊತೆಗೆ ಕಣ್ಣೀರು ಹಾಕಿದ್ದಾರೆ.
ಆರ್ಜೆ ಬಾಲಾಜಿ, ಕಾರಿನಲ್ಲಿ ಕುಳಿತು ವಿಡಿಯೋ ಒಂದನ್ನು ಮಾಡಿದ್ದಾರೆ, ವಿಡಿಯೋನಲ್ಲಿ ಮಾತನಾಡುತ್ತಾ, ‘ನಾನು ನನ್ನ ಕಾರಿನಿಂದ ನಿಮಗೆ ಮತ್ತೊಂದು ಅಪ್‌ಡೇಟ್ ನೀಡುತ್ತಿದ್ದೇನೆ. ಇದು ಕೊನೆಯ ಅಪ್‌ಡೇಟ್ ಆಗಿರಲಿ ಎಂದು ಆಶಿಸುತ್ತೇನೆ. ಎಲ್ಲಾ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಹೀಗಾಗಬಾರದಿತ್ತು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಸಿನಿಮಾ ನೋಡಲು ನೀವು ದೂರದ ಊರುಗಳಿಂದ ಚಿತ್ರಮಂದಿರಗಳಿಗೆ ಬಂದಿರುತ್ತೀರಿ. ಇದು ನಡೆಯಬಾರದಿತ್ತು, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.
ಮಾತು ಮುಂದುವರಿಸುತ್ತಾ ಭಾವುಕರಾದ ಅವರು, ‘ಜನರು ತಮ್ಮ ಜೀವನದ ಚಿಂತೆಗಳನ್ನು ಮರೆಯಲು ಸಿನಿಮಾ ನೋಡುತ್ತಾರೆ. ಸಿನಿಮಾ ನೋಡಲು ಸಾಧ್ಯವಾಗದ ಕಾರಣ ಮನನೊಂದಿರುವ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ನಾನು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ‘ಕರುಪ್ಪು’ ಸಿನಿಮಾ ಮೇ 14 ರಂದು ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆಗುತ್ತದೆ ಎಂದು ನಾನು ನಂಬಿದ್ದೆ. ನನಗೆ ಈಗಲೂ ಭರವಸೆ ಇದೆ. ನನಗೆ ನೋವಾಗುತ್ತಿದೆ, ಅದಕ್ಕೇ ಕಣ್ಣೀರು ಬರುತ್ತಿದೆ. ಇಂದು ಸಂಜೆ 6 ಗಂಟೆಗೆ ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲರೂ ಶ್ರಮಿಸುತ್ತಿದ್ದಾರೆ’ ಎಂದಿದ್ದಾರೆ. ಈ ವೇಳೆ ಬಾಲಾಜಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:ವಿಶೇಷ ದಿನದ ಸೀರೆಗೆ ‘ಪ್ರೀತಿ’ಯ ಕ್ಯಾಪ್ಶನ್ ಕೊಟ್ಟ ತ್ರಿಷಾ ಕೃಷ್ಣನ್
ಬಾಲಾಜಿ ಈ ಪೋಸ್ಟ್ ಹಾಕಿದ ಬೆನ್ನಲ್ಲೇ ನಟ ದುಲ್ಕರ್ ಸಲ್ಮಾನ್ ಬೆಂಬಲ ಸೂಚಿಸಿದ್ದು, ‘ಎಲ್ಲವೂ ಒಳ್ಳೆಯದೇ ಆಗುತ್ತದೆ ಸಹೋದರ, ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ದುಲ್ಕರ್ ಸಲ್ಮಾನ್ ಮಾತ್ರವೇ ಅಲ್ಲದೆ ಇನ್ನೂ ಹಲವರು ಬಾಲಾಜಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವ ಬಾಲಾಜಿ ಸ್ವತಃ ತಮಿಳಿನ ಜನಪ್ರಿಯ ಹಾಸ್ಯ ನಟರಾಗಿದ್ದು, ಬಹಳ ಕಷ್ಟಪಟ್ಟು ಸಿನಿಮಾಗಳಿಗೆ ಬಂದವರು. ಹಾಗಾಗಿ ಅವರಿಗೆ ಸಾಕಷ್ಟು ಬೆಂಬಲ, ಸಿಂಪತಿ ಸಹ ದೊರೆತಿದೆ.
ಭಾರಿ ಪ್ರಮಾಣದ ಅಡ್ವಾನ್ಸ್ ಬುಕಿಂಗ್ ಆಗಿದ್ದರೂ ಸಹ, ಚಿತ್ರದ ಹಣಕಾಸುದಾರರು ಮತ್ತು ನಿರ್ಮಾಣ ಸಂಸ್ಥೆಯ ನಡುವಿನ ಬಗೆಹರಿಯದ ಆರ್ಥಿಕ ವಿವಾದದ ಕಾರಣದಿಂದಾಗಿ ಭಾರತ ಮತ್ತು ವಿದೇಶಗಳ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ನಿಲ್ಲಿಸಲು ಒತ್ತಾಯಿಸಲಾಯಿತು. ವರದಿಗಳ ಪ್ರಕಾರ, ನಿರ್ಮಾಣ ಸಂಸ್ಥೆಯು 50 ಕೋಟಿಗೂ ಹೆಚ್ಚು ಸಾಲವನ್ನು ಹೊಂದಿದ್ದು, ಇದರಿಂದ ಉಂಟಾದ ಹಣಕಾಸಿನ ಬಿಕ್ಕಟ್ಟಿನ ಕಾರಣ ಚಿತ್ರಮಂದಿರ ಮಾಲೀಕರು ಬುಕಿಂಗ್ ನಿಲ್ಲಿಸಿ ಪ್ರೀಮಿಯರ್ ಶೋಗಳನ್ನು ರದ್ದುಗೊಳಿಸಿದ್ದಾರೆ. ಸದ್ಯ ಚಿತ್ರತಂಡವು ಈ ಸಮಸ್ಯೆಯನ್ನು ಬಗೆಹರಿಸಿ ಭಾರತ ಮತ್ತು ಅಮೆರಿಕದಾದ್ಯಂತ ಇಂದು ಸಂಜೆ 6 ಗಂಟೆಯ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 5:40 pm, Thu, 14 May 26
