Headlines

ಬೆಂಗಳೂರಿನಲ್ಲಿ ಕೇರಳ Vs ತಮಿಳುನಾಡು ವಿದ್ಯಾರ್ಥಿಗಳ ಗ್ಯಾಂಗ್ ವಾರ್; ಬರೀ ಹೊಡೆಯುವುದು ಮಾತ್ರವಲ್ಲ ಎಲ್ಲವನ್ನೂ ದೋಚೋಣ – Kannada News | Konanakunte Student Crime: Out of State College Students Arrested for Robbery, Assault

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಗಲಾಟೆ

ಬೆಂಗಳೂರು, ಏ,26: ರಾಜ್ಯ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ಗಲಾಟೆ ಹೆಚ್ಚಾಗುತ್ತಿದೆ. ಯಾರು ಹೇಳುವವರು – ಕೇಳುವವರು ಇಲ್ಲದ್ದಂತಾಗಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳ ನಡುವಿನ ಸಣ್ಣ ಕಿರಿಕ್, ಭೀಕರ ದರೋಡೆ ಮತ್ತು ಹಲ್ಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ತಮಿಳುನಾಡು ಮೂಲದ ವಿದ್ಯಾರ್ಥಿಗಳ ತಂಡ ಚಾಕುವಿನಿಂದ ಹಲ್ಲೆ ನಡೆಸಿ ದರೋಡೆ ಮಾಡಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಟಿ.ಜಾನ್ (T. John) ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗಳಲ್ಲಿ 4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಕೇರಳದ ಇರ್ಫಾನ್ ಮೊಹಮ್ಮದ್ ಮತ್ತು ಅವರ ಸ್ನೇಹಿತರು ಕೋಣನಕುಂಟೆಯ ಪವಮಾನ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಏಪ್ರಿಲ್ 17ರ ರಾತ್ರಿ ಇರ್ಫಾನ್, ಆದರ್ಶ್ ಮತ್ತು ಡಾರ್ವಿನ್ ಮನೆಯಲ್ಲಿದ್ದಾಗ ಈ ದಾಳಿ ನಡೆದಿದೆ.

ರಾತ್ರಿ ಸುಮಾರು 10:25ಕ್ಕೆ 6 ಜನರ ತಂಡ ಇರ್ಫಾನ್ ಅವರ ಮನೆಗೆ ನುಗ್ಗಿದ್ದಾರೆ. ಚಾಕು ತೋರಿಸಿ ಹಣಕ್ಕಾಗಿ ಬೆದರಿಸಿದ್ದಾರೆ. “ನಮ್ಮ ಬಳಿ ಹಣವಿಲ್ಲ” ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ತಂಡವು ಚಾಕುವಿನಿಂದ ಮೂವರ ಮೇಲೂ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಅವರ ಬಳಿ ಇದ್ದ 4 ಮೊಬೈಲ್ ಫೋನ್‌ಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕೋಣನಕುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡು ಮೂಲದ ನವೀನ್ ಕುಮಾರ್, ಕುಮಾರನ್, ವಿಮಲ್ ರಾಜ್, ಅಭಿನೇಶ್, ಕಲೈವೆಂದನ್ ಮತ್ತು ಪ್ರೇಮ್ ಕುಮಾರ್ ಎಂಬ ಆರು ಜನರನ್ನು ಬಂಧಿಸಿದ್ದಾರೆ. ಇವರ ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ. ದೂರುದಾರ ಇರ್ಫಾನ್ ಮತ್ತು ಆರೋಪಿ ಅಭಿನೇಶ್ ಒಂದೇ ಕಾಲೇಜಿನವರು ಎಂಬುದು ಗೊತ್ತಾಗಿದೆ. ಈ ಹಿಂದೆ ಕಾಲೇಜಿನಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ನಡೆದಾಗ ಕೇರಳ ಮೂಲದ ವಿದ್ಯಾರ್ಥಿಗಳು ಅಭಿನೇಶ್‌ಗೆ ಥಳಿಸಿದ್ದರು. ಇದರ ಸೇಡು ತೀರಿಸಿಕೊಳ್ಳಲು ಅಭಿನೇಶ್ ತಮಿಳುನಾಡಿನಿಂದ ತನ್ನ ಸ್ನೇಹಿತರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ, ಕೇರಳ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಬೇಕು ಎಂದು ಈ ಪ್ಲಾನ್​ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಜಮೀರ್ ದರ್ಗಾವಾಲೆ ಕೊಲೆ ಕೇಸ್: ಪ್ರಮುಖ ಆರೋಪಿ ಸೇರಿ ಐವರು ಅರೆಸ್ಟ್​; ಹತ್ಯೆಗೆ ಅದೇ ಕಾರಣ

“ಬರುವುದು ಬಂದಿದ್ದೇವೆ, ಬರೀ ಹೊಡೆಯುವುದು ಮಾತ್ರವಲ್ಲ ಎಲ್ಲವನ್ನೂ ದೋಚೋಣ” ಎಂದು ಪ್ಲಾನ್ ಮಾಡಿ ದರೋಡೆ ನಡೆಸಿದ್ದರು. ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವ ಕೋಣನಕುಂಟೆ ಪೊಲೀಸರು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಈಗ ವಿದ್ಯಾರ್ಥಿಗಳ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *