ಬೆಂಗಳೂರಿನಲ್ಲಿ ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ! – Kannada News | Viral Frying Pan Helmet in Bengaluru: HSR Layout Youth’s Stunt Raises Safety Concerns

ಬೆಂಗಳೂರು, ಏ.18: ಸಿಲಿಕಾನ್ ಸಿಟಿಯ ಟ್ರಾಫಿಕ್ ನಡುವೆ ವಿಲಕ್ಷಣ ಘಟನೆಗಳಿಗೇನೂ ಕೊರತೆಯಿಲ್ಲ. ಆದರೆ ಈಗ ಹೊರರಾಜ್ಯದ ಯುವಕನೊಬ್ಬ ಮಾಡಿರುವ ‘ಹುಚ್ಚಾಟ’ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಅಥವಾ ಟ್ರೋಲ್ ಆಗಲು ಈ ಯುವಕ ಹೆಲ್ಮೆಟ್ ಬದಲಿಗೆ ಅಡುಗೆ ಮನೆಯಲ್ಲಿ ಬಳಸುವ ಬಾಂಡ್ಲಿಯನ್ನು (Frying Pan) ತಲೆ ಮೇಲೆ ಇಟ್ಟುಕೊಂಡು ಬೈಕ್ ಸವಾರಿ ಮಾಡಿದ್ದಾನೆ. ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್ (HSR Layout) ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರೂಪೇನಾ ಅಗ್ರಹಾರ ಬಳಿ ಈ ಘಟನೆ ನಡೆದಿದೆ. ಕೆಎಲ್ 59 ಪಿ 7471 (KL 59 P 7471) ನೋಂದಣಿ ಸಂಖ್ಯೆಯ ಪಲ್ಸರ್ ಬೈಕ್‌ನಲ್ಲಿ ಕೇರಳ ಮೂಲದ ಯುವಕರು ಈ ಸಾಹಸ ಮಾಡಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸವಾರ ಹೆಲ್ಮೆಟ್ ಧರಿಸಿದ್ದರೂ, ಹಿಂಬದಿ ಕುಳಿತಿದ್ದ ಯುವಕ ಕೈಯಿಂದ ಬಾಂಡ್ಲಿಯನ್ನು ತಲೆ ಮೇಲೆ ಹಿಡಿದುಕೊಂಡಿದ್ದ. ದೂರದಿಂದ ನೋಡಿದರೆ ಅದು ಕಪ್ಪು ಬಣ್ಣದ ಹೆಲ್ಮೆಟ್‌ನಂತೆಯೇ ಭಾಸವಾಗುತ್ತಿತ್ತು. ಇತರ ವಾಹನ ಸವಾರರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಪೀಕ್ ಬೆಂಗಳೂರು ಮೊಮೆಂಟ್” (Peak Bengaluru Moment) ಎಂಬ ಶೀರ್ಷಿಕೆಯಡಿ ಈ ವಿಡಿಯೋ ಸಖತ್ ವೈರಲ್ ಆಗಿದೆ. “ಬಾಂಡ್ಲಿ ಆಮ್ಲೆಟ್ ಹಾಕಲು ಕೆಲಸಕ್ಕೆ ಬರುತ್ತದೆಯೇ ಹೊರತು, ಅಪಘಾತವಾದಾಗ ತಲೆ ಉಳಿಸುವುದಿಲ್ಲ” ಎಂದು ನೆಟ್ಟಿಗರು ಈ ಯುವಕನ ಕಾಲೆಳೆದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *