ನಗದು ಹಣ ಸಿಕ್ಕಿದ ಶೆಡ್ ಹಾಗೂ ಆರೋಪಿಗಳಾದ ವೆಂಕಟೇಶ (ಎಡ) ಮತ್ತು ನಾಗರಾಜ್ Image Credit source: tv9
ಬೆಂಗಳೂರು, ಜೂನ್ 27: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಾಖಲೆಗಳಿಲ್ಲದ ಕೋಟ್ಯಂತರ ರೂಪಾಯಿ ನಗದು ಹಣ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಕುರುಬರಹಳ್ಳಿಯ ಕೈಗಾರಿಕಾ ಶೆಡ್ ಒಂದರಲ್ಲಿ ಬಚ್ಚಿಡಲಾಗಿದ್ದ ಬರೋಬ್ಬರಿ 2,98,00,900 ರೂಪಾಯಿ (2.98 ಕೋಟಿ ರೂ.) ನಗದು ಹಣವನ್ನು ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾವರೆಕೆರೆ ನಿವಾಸಿಯೊಬ್ಬರು ಈ ಬೃಹತ್ ಮೊತ್ತವನ್ನು ಸ್ನೇಹಿತನ ಶೆಡ್‌ನಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ತಂಡದಿಂದ ದಾಳಿ
ಜೂನ್ 2 ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ರಾಕೇಶ್ ಮತ್ತು ಸಿಬ್ಬಂದಿ ಎಂದಿನಂತೆ ರೌಂಡ್ಸ್ ಹಾಗೂ ಗಸ್ತು ತಿರುಗುತ್ತಿದ್ದರು. ಈ ವೇಳೆ ಕುರುಬರಹಳ್ಳಿಯ 11 ನೇ ಕ್ರಾಸ್‌ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಶೆಡ್‌ನಲ್ಲಿ ಭಾರಿ ಪ್ರಮಾಣದ ನಗದು ಹಣ ಅಕ್ರಮವಾಗಿ ಇಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡವು ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ತುಂಬಿಟ್ಟಿದ್ದ ನೋಟುಗಳ ಕಂತೆಗಳು ಪತ್ತೆಯಾಗಿವೆ. ಪೊಲೀಸರು ಆ ಹಣವನ್ನು ತಂದು ಲೆಕ್ಕ ಹಾಕಿದಾಗ ಒಟ್ಟು 2.98 ಕೋಟಿ ರೂಪಾಯಿ ಇರುವುದು ದೃಢಪಟ್ಟಿದೆ.
ಆಸ್ತಿ ಮಾರಿದ ಹಣ ಎಂದ ಆರೋಪಿಗಳು: ಐಟಿ ತನಿಖೆ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಈ ನಗದು ಹಣವು ತಾವರೆಕೆರೆ ನಿವಾಸಿ ನಾಗರಾಜ್ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ನಾಗರಾಜ್ ಈ ಹಣವನ್ನು ಕುರುಬರಹಳ್ಳಿಯಲ್ಲಿರುವ ತನ್ನ ಸ್ನೇಹಿತ ವೆಂಕಟೇಶ್ ಎಂಬಾತನಿಗೆ ಸೇರಿದ ಶೆಡ್‌ನಲ್ಲಿ ಇಟ್ಟಿದ್ದರು. ತಕ್ಷಣವೇ ಪೊಲೀಸರು ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳಿಗೆ ಮಾಹಿತಿ ನೀಡಿ, ನ್ಯಾಯಾಲಯದ ಅನುಮತಿ ಪಡೆದ ಬಳಿಕ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ಹೇಳಿದ್ದೇನು?
ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ‘ನಾವು ಚಿತ್ರದುರ್ಗದಲ್ಲಿದ್ದ ನಮ್ಮ ಆಸ್ತಿಯನ್ನು ಮಾರಾಟ ಮಾಡಿ ಈ ಹಣವನ್ನು ತಂದಿದ್ದೇವೆ. ಬ್ಯಾಂಕಿನಲ್ಲಿರುವ ಸಾಲವನ್ನು ಚುಕ್ತಾ ಮಾಡಲು ಈ ನಗದನ್ನು ಇಟ್ಟುಕೊಂಡಿದ್ದೆವು’ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ
ಸದ್ಯ ಬಂಧಿತರಿಬ್ಬರೂ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೆ, ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳು ಇಲ್ಲದ ಕಾರಣ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹಾಗೂ ಐಟಿ ಇಲಾಖೆಯ ಅಧಿಕಾರಿಗಳು ಈ ಭಾರಿ ಮೊತ್ತದ ಅಸಲಿ ಮೂಲವನ್ನು ಪತ್ತೆ ಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
