ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್ ಉಗ್ರ ಪ್ರತ್ಯಕ್ಷ – Kannada News | Shoaib Akhtar’s Brother Funeral: Hafiz Saeed’s Son, LeT Terrorists Spotted in Pakistan

ಇಸ್ಲಾಮಾಬಾದ್, ಜೂನ್ 27: ಪಾಕಿಸ್ತಾನ(Pakistan)ವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ ಎಂಬ ಭಾರತದ ವಾದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಂತಾಗಿದೆ. ಪಾಕಿಸ್ತಾನದ ಮಾಜಿ ಸ್ಟಾರ್ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರ ಅಂತ್ಯಕ್ರಿಯೆಯಲ್ಲಿ, ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಭಯೋತ್ಪಾದಕರು ಹಾಗೂ ಹಫೀಜ್ ಸಯೀದ್‌ನ ಪುತ್ರ ತಲ್ಹಾ ಹಾಗೂ ಇತರೆ ಸಹಚರರು ಬಹಿರಂಗವಾಗಿ ಭಾಗವಹಿಸಿರುವುದು ತೀವ್ರ ವಿವಾದವನ್ನು ಸೃಷ್ಟಿಸಿದೆ. ಈ ಘಟನೆಯ ವಿಡಿಯೋಗಳು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಸುಳ್ಳನ್ನು ಜಗಜ್ಜಾಹೀರುಗೊಳಿಸಿವೆ.

ನಿಷೇಧಿತ ಜಮಾತ್-ಉದ್-ದವಾ  ಅಂಗಸಂಸ್ಥೆಯಾದ ‘ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್’  ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಉಗ್ರರ ಉಪಸ್ಥಿತಿ ಪತ್ತೆಯಾಗಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್‌ನ ಮಗ ತಲ್ಹಾ ಸಯೀದ್ ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾನೆ.

ಇಸ್ಲಾಮಾಬಾದ್‌ನ ಪಿಎಂಎಂಎಲ್ ಮುಖ್ಯಸ್ಥ ಇನಾಮ್-ಉರ್-ರೆಹಮಾನ್ ಕಾಂಬೋಹ್, ಅಬ್ದುಲ್ಲಾ ತೂರ್, ಹಫೀಜ್ ಉಮರ್ ಮತ್ತು ಅಮ್ಜದ್ ಭಟ್ಟಿ ಸೇರಿದಂತೆ ಹಲವು ಕುಖ್ಯಾತ ಉಗ್ರರು ಸಾರ್ವಜನಿಕವಾಗಿ ಯಾವುದೇ ಭಯವಿಲ್ಲದೆ ಇಲ್ಲಿ ಓಡಾಡಿಕೊಂಡಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಪಾಕಿಸ್ತಾನದ ದ್ವಂದ್ವ ನೀತಿ ಬಯಲು
ಜಾಗತಿಕ ವೇದಿಕೆಗಳಲ್ಲಿ ತಾವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಬಿಂಬಿಸಿಕೊಳ್ಳುವ ಪಾಕಿಸ್ತಾನದ ಬೆತ್ತಲೆ ಮುಖ ಈ ಘಟನೆಯಿಂದ ಬಯಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೊಳಗಾಗಿರುವ ಉಗ್ರರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಭಾಗವಹಿಸುತ್ತಿರುವುದು ಅಲ್ಲಿನ ಸರ್ಕಾರದ ಕುಮ್ಮಕ್ಕನ್ನು ಎದ್ದು ತೋರಿಸುತ್ತದೆ. ಭಾರತ ಈಗಾಗಲೇ ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಹಲವು ಬಾರಿ ಕಳವಳ ವ್ಯಕ್ತಪಡಿಸಿದೆ.

ಅಮೆರಿಕ ವರದಿಗೆ ಸಿಕ್ಕ ಸಾಕ್ಷಿ
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅಮೆರಿಕದ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ (CRS) ವರದಿಯು, ಪಾಕಿಸ್ತಾನವು ತನ್ನ ದೇಶದಲ್ಲಿರುವ ಭಯೋತ್ಪಾದಕ ಗುಂಪುಗಳು ಮತ್ತು ವ್ಯಕ್ತಿಗಳು ಬಹಿರಂಗವಾಗಿ ಕಾರ್ಯನಿರ್ವಹಿಸುವುದನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಉಲ್ಲೇಖಿಸಿತ್ತು. ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಹಫೀಜ್ ಸಯೀದ್ ಮಗ ತಲ್ಹಾ ಸಯೀದ್ ಕಾಣಿಸಿಕೊಂಡಿರುವುದು ಈ ವರ್ಷದಲ್ಲಿ ಇದು ಎರಡನೇ ಬಾರಿಯಾಗಿದ್ದು, ಏಪ್ರಿಲ್‌ನಲ್ಲಿ ಆತ ಸ್ವತಃ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಶೇಷ ಸಹಾಯಕ ರಾಣಾ ಸನಾವುಲ್ಲಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಈ ವಾರದ ಆರಂಭದಲ್ಲಿ ನಿಧನರಾಗಿದ್ದು, ಅವರ ಸಾವಿಗೆ ನಿಖರ ಕಾರಣವನ್ನು ಕುಟುಂಬಸ್ಥರು ಬಹಿರಂಗಪಡಿಸಿಲ್ಲ. ಆದರೆ ಅವರ ಜನಾಜಾ ಪ್ರಾರ್ಥನೆಯು ಈಗ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನೀತಿಯನ್ನೇ ಜಾಗತಿಕವಾಗಿ ಅಣಕಿಸುವಂತೆ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:54 am, Sat, 27 June 26

Source link

Leave a Reply

Your email address will not be published. Required fields are marked *