ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇImage Credit source: Google
ಬೆಂಗಳೂರು, ಫೆಬ್ರವರಿ 23: ಶೀಘ್ರದಲ್ಲಿಯೇ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ, ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಂದಿದೆ. ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಣಿಕರು 2027ರ ವರೆಗೂ ಕಾಯಬೇಕಾಗಬಹುದು ಎನ್ನಲಾಗಿದ್ದು, ಕೆಲವು ಅಡಚಣೆಗಳು ಕಾಮಗಾರಿಯ ವೇಗಕ್ಕೆ ಬ್ರೇಕ್ ಹಾಕಿದೆ. ಈ ಕಾರಿಡಾರ್ ಮೂರು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಗಡಿ ದಾಟಿ ಸಮನ್ವಯ ಸಾಧಿಸುವುದು ಅಧಿಕಾರಿಗಳಿಗೆ ಸವಾಲಾಗುತ್ತಿದೆ. ವರದಿಗಳ ಪ್ರಕಾರ, 263 ಕಿಲೋ ಮೀಟರ್ ಉದ್ದದ ಈ ಕಾರಿಡಾರ್ ಯೋಜನೆಯಲ್ಲಿ ತಮಿಳುನಾಡು ಭಾಗದಲ್ಲೇ ಪ್ರಮುಖ ಅಡಚಣೆಗಳು ಎದುರಾಗಿವೆ ಎನ್ನಲಾಗಿದೆ.
ಸದ್ಯದ ಸ್ಥಿತಿಗತಿ ಏನು?
- ಕರ್ನಾಟಕ ಭಾಗದಲ್ಲಿ ಶೇ.100ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹೊಸಕೋಟೆಯಿಂದ ಕೆಜಿಎಫ್‌ವರೆಗೆ 72 ಕಿ.ಮೀ. ಸುಮಾರು ಒಂದು ವರ್ಷದಿಂದ ಸಂಚಾರಕ್ಕೆ ಮುಕ್ತವಾಗಿದೆ.
- ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ಶೇ.92ರಷ್ಟು ಅಂದರೆ 85 ಕಿ.ಮೀ. ಉದ್ದದ ರಸ್ತೆಯ ಪೈಕಿ ಬಹುತೇಕ ಕಾಮಗಾರಿ ಕಂಪ್ಲೀಟ್ ಆಗಿದೆ.
- ಆದರೆ ತಮಿಳುನಾಡು ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದ ಕಾಮಗಾರಿ ಬಾಕಿ ಉಳಿದಿದೆ. ಶೇ.80ರಷ್ಟು ಮಾತ್ರ ಕೆಲಸ ಆಗಿದ್ದು, 106 ಕಿ.ಮೀ. ಉದ್ದದ ಈ ಭಾಗದಲ್ಲಿಯೇ ಇನ್ನೂ ಶೇ.20ರಷ್ಟು ಕಾಮಗಾರಿ ಆಗಬೇಕಿದೆ.
ಇದನ್ನೂ ಓದಿ: ಮತ್ತಷ್ಟು ವಿಳಂಬವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ವೇ ಕಾಮಗಾರಿ
ವಿಳಂಬಕ್ಕೆ ಕಾರಣವೇನು?
ಮೊದಲಿನ ಯೋಜನೆಯ ಪ್ರಕಾರ 2024ರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅರಣ್ಯ ಅನುಮತಿಗಳನ್ನು ಪಡೆಯುವಲ್ಲಿ ವಿಳಂಬ, ಭೂಸ್ವಾಧೀನ ಸಮಸ್ಯೆಗಳು ಮತ್ತು ಹಣಕಾಸು ಸಂಕಷ್ಟ ಯೋಜನೆಗೆ ಹಿನ್ನೆಡೆ ಉಂಟು ಮಾಡಿವೆ. ತಮಿಳುನಾಡಿನ ಅರಕ್ಕೋಣಂ–ಕಾಂಚೀಪುರಂ ಭಾಗದ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ನಿಧಿ ಕೊರತೆ ಉಂಟಾಗಿ, 2025ರ ಮೇ ತಿಂಗಳಲ್ಲಿ ಕೆಲಸ ಸಂಪೂರ್ಣ ನಿಂತಿದೆ.
ಇನ್ನು ಇದು ಗ್ರೀನ್‌ಫೀಲ್ಡ್ (ಹೊಸ ಮಾರ್ಗ) ಯೋಜನೆಯಾಗಿರುವುದರಿಂದ, ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕವೇ ಸಂಚಾರಕ್ಕೆ ಮುಕ್ತವಾಗಲು ಸಾಧ್ಯ. ಮಧ್ಯದಲ್ಲಿ 25 ಕಿ.ಮೀ. ಕಾಮಗಾರಿ ಬಾಕಿ ಇರುವಾಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಬರಲ್ಲ. ಹೀಗಾಗಿ ಕುಂಟುತ್ತಾ ಕಾಮಗಾರಿ ಸಾಗಿರುವ ಹಿನ್ನೆಲೆ, ಕ್ರಮಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿರೋದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
