ತುಮಕೂರು, ಫೆಬ್ರವರಿ 23: ಅವರು ವಿದ್ಯಾವಂತರು. ತುರುವೇಕೆರೆ ಬಿಇಒ ಕಚೇರಿಯ ಎಫ್ಡಿಎ (FDA) ಅಧಿಕಾರಿ. ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇತ್ತು. ಎಲ್ಲರ ಜೊತೆ ಖುಷಿ ಖುಷಿಯಾಗಿದ್ದು, ಅವರ ಆರೋಗ್ಯ ಸಹ ಚೆನ್ನಾಗಿಯೇ ಇತ್ತು. ಆದರೆ ಅದೊಂದು ದಿನ ರಾತ್ರಿ ಮಲಗಿದ ಅವರು ಮತ್ತೆ ಮೇಲೇಳಲೇ ಇಲ್ಲ. ಜೊತೆಗಿದ್ದ ಸಹೋದರಿ ಮತ್ತು ಸಾಕು ಮಗ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಕಣ್ಣೀರು ಹಾಕಿದ್ದರು. ಇಬ್ಬರ ಮಾತನ್ನು ನಂಬಿದ ಇಡಿ ಊರೇ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿತ್ತು. ಇನ್ನೇನು ಮೃತದೇಹ ಮಣ್ಣಿ ಗಿಡುವ ಸಮಯ, ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಅದು ಅಸಹಜ ಸಾವಲ್ಲ ಬದಲಿಗೆ ಕೊಲೆ (murder) ಎನ್ನುವುದು ಬಯಲಾಗಿದೆ.
ಕೊಲೆಯಾದ ಮಹಿಳೆ ಹೆಸರು ಜಯಲಕ್ಷ್ಮಿ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಜೋಗಿಪಾಳ್ಯ ನಿವಾಸಿ. ವೃತ್ತಿಯಲ್ಲಿ ತುರುವೇಕೆರೆ ಬಿಇಒ ಕಚೇರಿಯ ಎಫ್ಡಿಎ ಅಧಿಕಾರಿ. ಸರ್ಕಾರಿ ಶಿಕ್ಷಕನಾಗಿದ್ದ ಪತಿ ಶ್ರೀನಿವಾಸ್ ಕಳೆದ 25 ವರ್ಷಗಳ ಹಿಂದೆ ನಿಧನ ಹೊಂದಿದ್ದು, ಆ ಬಳಿಕ ಅನುಕಂಪದ ಆಧಾರದ ಮೇಲೆ ಸಿಕ್ಕ ಕೆಲಸವದು. ಆರ್ಥಿಕವಾಗಿ ಚೆನ್ನಾಗಿದ್ದ ಇವರು ಫೆಬ್ರವರಿ 19ರ ರಾತ್ರಿ ಸಾವನಪ್ಪಿದ್ದಾರೆ.
ಇದನ್ನೂ ಓದಿ: Tumakuru: ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ!
ಗಂಡನ ನಿಧನದ ಬಳಿಕ ಒಂಟಿಯಾಗಿದ್ದ ಜಯಲಕ್ಷ್ಮಿ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತುಮಕೂರು ಪಟ್ಟಣದಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ತನ್ನ ತಂಗಿ ಅನುಸೂಯ ಮಗ ಚಂದ್ರಶೇಖರ್ನನ್ನೇ ದತ್ತು ಪಡೆದು ಸಾಕಿದ್ದರು. ಆತ ಸಹ ಚೆನ್ನಾಗಿ ಓದಿಕೊಂಡಿದ್ದ. ಬೆಳೆದು ದೊಡ್ಡವಾನದ ಆತ ಖಾಸಗಿ ಆಸ್ಪತ್ರೆಯ ಲ್ಯಾಬ್ನಲ್ಲಿ ಕೆಲಸ ಮಾಡಿಕೊಂಡು ತುಮಕೂರಿನಲ್ಲಿ ವಾಸವಿದ್ದ. ಆದರೇ ಅದ್ಯಾಕೋ ಕಳೆದ ಎಂಟು ತಿಂಗಳ ಹಿಂದಷ್ಟೇ ತನ್ನ ತಾಯಿ ಅನುಸೂಯ ಜೊತೆ ಸಾಕು ತಾಯಿ ಜಯಲಕ್ಷ್ಮಿಯ ಚಿಕ್ಕನಾಯಕನಹಳ್ಳಿ ಮನೆಗೆ ಬಂದು ವಾಸವಿದ್ದ. ಹೀಗೆ ಮೂವರು ವಾಸವಿದ್ದ ಜೋಗಿಪಾಳ್ಯದ ಮನೆಯಲ್ಲಿ ರಾತ್ರಿ ಎಲ್ಲರೊಟ್ಟಿಗೆ ಊಟ ಮಾಡಿದ್ದ ಜಯಲಕ್ಷ್ಮಿ ಬೆಳಗಾಗುವಷ್ಟರಲ್ಲಿ ಸಾವನಪ್ಪಿದ್ದರು.
ಶವ ಮಣ್ಣು ಮಾಡುವಷ್ಟರಲ್ಲೇ ಸ್ಫೋಟಕ ಟ್ವಿಸ್ಟ್
ಮಲಗಿದ್ದ ಜಾಗದಲ್ಲೇ ಜಯಲಕ್ಷ್ಮಿ ಕೊನೆಯುಸಿರು ಎಳೆದರೆ, ಮಗ ಹಾಗೂ ತಂಗಿ ಅನುಸೂಯ ಕಣ್ಣೀರು ಹಾಕಿದ್ದರು. ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದಿದ್ದರು. ಜೊತೆಗೆ ಮೃತದೇಹ ಊರಿಗೆ ತರುವುದಾಗಿ, ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಹೇಳಿದ್ದರು. ಹೀಗೆ ರಾತ್ರಿ ಮೃತಪಟ್ಟ ಜಯಲಕ್ಷ್ಮಿ ಶವ ಬೆಳಗಾಗುವಷ್ಟರಲ್ಲಿ ಕಂಟಲಕೆರೆ ಊರು ತಲುಪಿತ್ತು. ಅದಾಗಲೇ ವಿಚಾರ ಬಾಯಿಂದ ಬಾಯಿಗೆ ಎಂಬಂತೆ ಎಲ್ಲರಿಗೂ ತಲುಪಿತ್ತು. ಸಂಬಂಧಿಕರು ಸಹ ಕಂಟಲಕೆರೆಯ ನಿವಾಸದತ್ತು ಬಂದಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ಸಹ ನಡೆದು ಮಣ್ಣು ಮಾಡುವ ಕಾರ್ಯಕ್ಕೆಂದು ಶವ ಜಮೀನಿನತ್ತ ತೆಗೆದುಕೊಂಡು ಹೊರಟಿದ್ದರು. ಆದರೆ ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರು ಅವರ ಸಾವಿನ ಸಂಗತಿಗೆ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದರು. ಅಸಲಿಗೆ ಜಯಲಕ್ಷ್ಮಿ ಹೃದಯಾಘಾತದಿಂದ ಸಾವನಪ್ಪಿರಲಿಲ್ಲ, ಬದಲಾಗಿ ಅವರ ಕೊಲೆಯಾಗಿತ್ತು.
ಜಯಲಕ್ಷ್ಮಿ ಸಾವಿನ ಬಗ್ಗೆ ವ್ಯಕ್ತಿ ಅನುಮಾನ
ಜಯಲಕ್ಷ್ಮಿ ಸಾವಿನ ಪ್ರಕರಣದಲ್ಲಿ ತಿರುವು ಕೊಟ್ಟಿದ್ದು ಅದೊಬ್ಬ ವ್ಯಕ್ತಿಯ ದೂರು. ಅವರ ಸಾವಿನ ಸಂಗತಿ ಕೇಳಿ ಎಲ್ಲರಿಗಿಂತ ಆ ವ್ಯಕ್ತಿ ಅತಿಯಾಗಿ ಮರುಗಿದ್ದರು. ಜಯಲಕ್ಷ್ಮಿಗೆ ಜೀವಕ್ಕೆ ಜೀವವಾಗಿದ್ದ ವ್ಯಕ್ತಿ. ಜಯಲಕ್ಷ್ಮಿ ಎಂದರೇ ಆತನಿಗೆ ಎಲ್ಲಿಲ್ಲದ ಪ್ರೀತಿ. ಅಸಲಿಗೆ ಜಯಲಕ್ಷ್ಮಿಗೂ ಸಹ ಆತನ ಮೇಲೆ ಅದೇ ರೀತಿಯ ಭಾವನೆ. ಆತನ ಹೆಸರು ಶ್ರೀನಿವಾಸ್.
ಜಯಲಕ್ಷ್ಮಿ ಗಂಡ ಕಳೆದುಕೊಂಡ ಬಳಿಕ ಪರಿಚಯವಾಗಿದ್ದ ಶ್ರೀನಿವಾಸ್, ಆಕೆಗೆ ಆತ್ಮೀಯನಾಗಿದ್ದ. ಗಂಡನಂತೆ ಆಕೆಯ ಜೊತೆಗಿದ್ದರು ಸಹ ಮದುವೆಯಾಗಿರಲಿಲ್ಲ ಅಷ್ಟೇ. ಪೊಲೀಸ್ ಮಾಹಿತಿ ಪ್ರಕಾರ ಇಬ್ಬರಲ್ಲೂ ಅತಿಯಾದ ಪ್ರೀತಿ ಇತ್ತು. ಒಟ್ಟಿಗೆ ವಾಸ ಸಹ ಮಾಡುತಿದ್ದರು. ಇಷ್ಟು ಚೆನ್ನಾಗಿದ್ದ ಇಬ್ಬರು ಕಳೆದ ಕೆಲ ತಿಂಗಳಿಂದ ಪ್ರತ್ಯೇಕವಾಗಿ ವಾಸ ಮಾಡುತಿದ್ದರು. ಇದರ ನಡುವೆ ಜಯಲಕ್ಷ್ಮಿ ಸಾವು ಶ್ರೀನಿವಾಸ್ಗೆ ಅನುಮಾನ ಮೂಡಿಸಿತ್ತು. ಹೀಗಾಗಿಯೇ ಆತ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಜಯಲಕ್ಷ್ಮಿ ಸಾವಿನ ಬಗ್ಗೆ ಅನುಮಾನದ ದೂರು ನೀಡಿದ್ದ.
ದೂರು ಹಿನ್ನಲೆ ತನಿಖೆ ಕೈಗೊಂಡ ಪೊಲೀಸರಿಗೆ ಮೃತ ಜಯಲಕ್ಷ್ಮಿ ಸಹೋದರಿ ಅನುಸೂಯ ಹಾಗೂ ಸಾಕು ಮಗ ಚಂದ್ರಶೇಖರ್ ಕಳ್ಳಾಟ ಬಯಲಾಗಿದೆ. ಎಲ್ಲರ ಮುಂದೆ ಇಬ್ಬರು ಹಾಕಿದ ಮೊಸಳೆ ಕಣ್ಣೀರಿನ ಹಿಂದಿನ ಸತ್ಯ ಪತ್ತೆಯಾಗಿದೆ. ಅನುಸೂಯ ತನ್ನ ಒಡಹುಟ್ಟಿದ ಅಕ್ಕನನ್ನು ತಾನು ಜನ್ಮ ನೀಡಿದ ಮಗನೊಂದಿಗೆ ಸೇರಿ ಕೊಲೆ ಮಾಡಿ ಬಿಟ್ಟಿದ್ದಳು. ಮಾಡಿದ ಕೊಲೆ ಮುಚ್ಚಿ ಹಾಕಲು ಹೃದಯಾಘಾತದ ಕಥೆ ಕಟ್ಟಿದ್ದಳು. ಆ ಕಥೆ ಮುಚ್ಚಿ ಹಾಕಲು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಈ ಎಲ್ಲಾ ವಿಚಾರ ತಿಳಿದ ಪೊಲೀಸರು ಕೂಡಲೇ ಇಬ್ಬರನ್ನು ಬಂಧಿಸಿ ತನಿಖೆ ಆರಂಭಿಸಿದ್ದರು. ಆಗಲೇ ಬಯಲಾಗಿದ್ದು ಜಯಲಕ್ಷ್ಮಿ ಸಾವಿನ ಹಿಂದಿನ ಸ್ಫೋಟಕ ಸಂಗತಿ.
ಶ್ರೀನಿವಾಸ್ ಪರಿಚಯ: ಒಂದೇ ಮನೆಯಲ್ಲಿ ವಾಸ
ಜಯಲಕ್ಷ್ಮಿಗೆ ಆಗಿನ್ನು ವಯಸ್ಸು 22. ಕುಟುಂಬ ನಿಶ್ಚಿಸಿದಂತೆ ಸರ್ಕಾರಿ ನೌಕರ ಶ್ರೀನಿವಾಸ್ ಎಂಬಾತನ ಜೊತೆ ಮದುವೆಯಾಗಿತ್ತು. ದುರಂತ ಅಂದರೆ ಮದುವೆಯಾದ 3 ವರ್ಷಕ್ಕೆ ಆತ ಸಾವನಪ್ಪಿದ್ದ. ಆತನ ಸಾವಿನ ಬಳಿಕ ಜಯಲಕ್ಷ್ಮಿ ಒಂಟಿಯಾಗಿದ್ದರು. ಗಂಡನ ಸರ್ಕಾರಿ ಕೆಲಸ ಅನುಕಂಪದ ಆಧಾರದಲ್ಲಿ ಜಯಲಕ್ಷ್ಮಿಗೆ ಸಿಕ್ಕಿತ್ತು. ಆಗ ಅವರಿಗೆ 25 ವರ್ಷ. ಒಂದು ಕಡೆ ಗಂಡನನ್ನು ಕಳೆದುಕೊಂಡ ವಿಧವೆ, ಈ ನಡುವೆ ಅನುಕಂಪದ ಸರ್ಕಾರಿ ಉದ್ಯೋಗ ಅವರ ಜೀವನ ಬದಲಿಸಿತ್ತು. ಚಿಕ್ಕವಯಸ್ಸಿಗೆ ಒಂಟಿಯಾಗಿದ್ದ ಅವರಿಗೆ ಅದೇಗೋ ಅದೇ ಊರಿನ ಕೇಬಲ್ ವ್ಯವಹಾರ ಮಾಡುತಿದ್ದ ಶ್ರೀನಿವಾಸ್ ಎಂಬುವವರ ಪರಿಚಯವಾಗಿದೆ. ಆರಂಭದಲ್ಲಿ ಸಿಕ್ಕಾಗ ಮಾತನಾಡುತ್ತಿದ್ದ ಇಬ್ಬರು ನಂತರದಲ್ಲಿ ಮಾತಾಡಲೆಂದೇ ಸುತಿದ್ದರು. ಪರಿಚಯ ಗೆಳೆತನವಾಗಿ ಬಹುಬೇಗ ಪ್ರೀತಿಗೆ ಬದಲಾಗಿತ್ತು. ನಂತರದಲ್ಲಿ ಇಬ್ಬರು ಸಹ ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುತಿದ್ದರಾದರೂ ಸಹ ಮದುವೆಯಾಗಿರಲಿಲ್ಲ.
ಸರ್ಕಾರಿ ನೌಕರಿಯಲ್ಲಿದ್ದ ಜಯಲಕ್ಷ್ಮಿ ಎಲ್ಲವನ್ನು ನೋಡಿಕೊಳ್ಳುತಿದ್ದರು. ಒಂಟಿಯಾಗಿದ್ದ ಅವರಿಗೆ ಶ್ರೀನಿವಾಸನ ಸಂಗತಿ ಜೀವನ ದಿನ ದೂಡುವಂತೆ ಮಾಡಿತ್ತಾದರೂ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿಯೇ ಜಯಲಕ್ಷ್ಮಿ ತುಮಕೂರಿನಲ್ಲಿ ವಾಸವಿದ್ದ ತನ್ನ ತಂಗಿ ಅನುಸೂಯಳ ಮಗ ಚಂದ್ರಶೇಖರ್ ನನ್ನು ದತ್ತು ಪಡೆದಿದ್ದಳು. ಚಂದ್ರಶೇಖರ್ ಸಹ ಓದಿನಲ್ಲಿ ಮುಂದಿದ್ದ. ಇನ್ನು ಅನುಸೂಯಾಳಿಗೆ ಕೌಟುಂಬಿಕ ಸಮಸ್ಯೆ ಇತ್ತು. ಗಂಡನಿಂದ ದೂರದ ಅವರು ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತಿದ್ದರು. ಹೀಗಾಗಿ ತಂಗಿಯ ಮಗನ ದತ್ತು ಪಡೆದ ಜಯಲಕ್ಷ್ಮಿ ಆತನ ಆರ್ಥಿಕ ವೆಚ್ಚವನ್ನು ನೋಡಿಕೊಂಡಿದ್ದರು. ನಂತರದಲ್ಲಿ ಬೆಳೆದು ದೊಡ್ಡವನಾದ ಆತ ಖಾಸಗಿ ಆಸ್ಪತ್ರೆಯ ಲ್ಯಾಬ್ನಲ್ಲಿ ಕೆಲಸಕ್ಕೆ ಸೇರಿದ್ದ.
ಶ್ರೀನಿವಾಸ್ ಕಂಡು ಕೆಂಡ
ಇತ್ತ ಎಲ್ಲವೂ ಚೆನ್ನಾಗಿತ್ತು ಅನ್ನುವಾಗಲೇ ಜಯಲಕ್ಷ್ಮಿ ಬದುಕಿನಲ್ಲಿ ವಿಧಿಯಾಟ ಎಲ್ಲವನ್ನೂ ಬದಲಾಯಿಸ ತೊಡಗಿತ್ತು. ಜಯಲಕ್ಷ್ಮಿ 58ನೇ ವಯಸ್ಸಿಗೆ ಕಾಲಿಟ್ಟ ಬಳಿಕ ನಿವೃತ್ತಿಯ ಸಮಯಕ್ಕೆ ಕೆಲವೇ ವರ್ಷ ಬಾಕಿ ಇತ್ತು. ಈ ನಡುವೆ ತುಮಕೂರಿನಲ್ಲಿ ವಾಸವಿದ್ದ ಅನುಸೂಯ ಹಾಗೂ ಮಗ ಚಂದ್ರಶೇಖರ್ ಕೆಲಸ ಬಿಟ್ಟಿದ್ದರು. ಬಳಿಕ ನೇರವಾಗಿ ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಮನೆಗೆ ಬಂದವರೇ ಅಲ್ಲಿಯೇ ಸೆಟಲ್ ಆಗಿ ಬಿಟ್ಟರು. ಆದರೆ ಜಯಲಕ್ಷ್ಮಿ ಮನೆಯಲ್ಲಿ ಅದಾಗಲೇ ಶ್ರೀನಿವಾಸ್ ವಾಸವಿದ್ದ. ಆತನನ್ನು ಕಂಡು ಕಣ್ಣು ಕೆಂಡ ಮಾಡಿಕೊಂಡಿದ್ದ ಇಬ್ಬರು ಒಳಗೊಳಗೆ ಕತ್ತಿ ಮಸೆದಿದ್ದರು. ಅದರಂತೆ ಬಂದ ಎರಡು ತಿಂಗಳಿಗೆ ಶ್ರೀನಿವಾಸ್ ಮನೆ ಬಿಡುವಂತೆ ಮಾಡಿದ್ದರು. ಹೀಗೆ ಮನೆಯಿಂದ ಹೊರಟ ಶ್ರೀನಿವಾಸ್ ವಿಚಾರದಲ್ಲಿ ಜಯಲಕ್ಷ್ಮಿ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಸಾಕು ಮಗ ಚಂದ್ರಶೇಖರ್, ತಂಗಿ ಅನುಸೂಯ ಜೊತೆ ಮನೆಯಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಹೀಗೆ ನಡೆದ ಮಾತಿನ ನಡುವೆ ತಾನು ಕಟ್ಟಿಸಿದ್ದ ಸ್ವಂತ ಮನೆಯನ್ನೇ ಜಯಲಕ್ಷ್ಮಿ ಬಿಡಲು ಸಿದ್ಧವಾಗಿದ್ದರು. ಅಷ್ಟೇ ಅಲ್ಲದೇ ಶ್ರೀನಿವಾಸ್ ಜೊತೆ ಮತ್ತೊಂದು ಮನೆ ಮಾಡಿಕೊಂಡು ವಾಸ ಮಾಡಲು ನಿರ್ಧರಿಸಿದ್ದರು.
ತಾನು ಸಂಪಾದಿಸಿದ್ದ ಮನೆ ಬಿಡಲು ಮುಂದಾದ ಜಯಲಕ್ಷ್ಮಿ ತುರುವೇಕೆರೆಯಲ್ಲಿ ಶ್ರೀನಿವಾಸ್ ಜೊತೆ ವಾಸಿಸೊದಕ್ಕೆ ಬಾಡಿಗೆ ಮನೆ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಮನೆಯೊಂದನ್ನು ನೋಡಿದ್ದ ಅವರು ಅಡ್ವಾನ್ಸ್ ಸಹ ನೀಡಿದ್ದರು. ಅವರು ಸಹ ಶಿಫ್ಟ್ ಆಗಲು ತಯಾರಿ ನಡೆಸಿದ್ದರು. ಮತ್ತೊಂದು ಕಡೆ ಶ್ರೀನಿವಾಸ್, ಜಯಲಕ್ಷ್ಮಿ ಜೊತೆ ಬದುಕು ಸಾಗಿಸಲು ಕಾಯುತಿದ್ದ. ಈ ನಡುವೆ ಜಯಲಕ್ಷ್ಮಿ ಕೊಲೆಯಾಗಿದೆ.
ಅತ್ತ ಕೆಲಸ ಬಿಟ್ಟು ಜಯಲಕ್ಷ್ಮಿ ಮನೆಗೆ ಬಂದ ಅನುಸೂಯ ಹಾಗೂ ಚಂದ್ರಶೇಖರ್ ತಲೆಯಲ್ಲಿದ್ದ ಯೋಚನೆಗಳೇ ಬೇರೆಯಾಗಿದ್ದವು. ಕೈ ತುಂಬ ಸಂಬಳ ಇದ್ದ ಜಯಲಕ್ಷ್ಮಿ ಹೇಗಿದ್ದರೂ ಒಂಟಿ. ತನ್ನ ಮಗನನ್ನೇ ದತ್ತು ಪಡೆದಿದ್ದಾಳೆ. ಹೀಗಾಗಿ ಆಕೆಯ ಸಂಪತ್ತೆಲ್ಲಾ ನಮ್ಮದೇ ಎಂದು ಮನೆಗೆ ಬಂದು ಸೆಟಲ್ ಆಗಿ ಬಿಟ್ಟಿದ್ದರು. ಆದರೆ ಈ ನಡುವೆ ಆಕೆಯ ಜೊತೆಗಿದ್ದ ಶ್ರೀನಿವಾಸ್ ಇವರ ಯೋಚನೆಗಳಿಗೆ ಗೊಂದಲ ಸೃಷ್ಟಿಸಿದ್ದ. ಎಲ್ಲವನ್ನು ಬಿಟ್ಟು ಜಯಲಕ್ಷ್ಮಿ ಆತನ ಜೊತೆ ಹೊಗಲು ನಿರ್ಧರಿಸಿದ್ದರು. ನಾವು ನಂಬಿದ ಜಯಲಕ್ಷ್ಮಿ ಎಲ್ಲಿ ನಮ್ಮನ್ನು ಬಿಟ್ಟು ಹೊಗುತ್ತಾಳೋ ಎಂಬ ಯೋಚನೆಯಲ್ಲಿದ್ದ ಅನುಸೂಯ ಹಾಗೂ ಚಂದ್ರಶೇಖರ್ಗೆ ಮುಂದೊಂದು ದಿನ ಆರ್ಥಿಕವಾಗಿ ಸಂಕಷ್ಟ ಎದುರಾಗುವ ಆತಂಕ ಮೂಡಿತ್ತು. ಹೀಗಾಗಿಯೇ ಇಬ್ಬರು ಸೇರೆ ಅದೊಂದು ಪ್ಲ್ಯಾನ್ ರೆಡಿ ಮಾಡಿದ್ದಾರೆ.
ಸರ್ಕಾರಿ ಕೆಲಸಕ್ಕಾಗಿ ಕೊಲೆ
ಜಯಲಕ್ಷ್ಮಿ ಹೇಗೊ ನಿವೃತ್ತಿ ಹಂತದಲ್ಲಿದ್ದಾರೆ. ಆಕೆಗೆ ಲಕ್ಷ ಲಕ್ಷ ಹಣ ಬರುತ್ತದೆ. ಎಲ್ಲವೂ ನಮ್ಮದೇ ಅಂದುಕೊಂಡಿದ್ದ ಅನುಸೂಯ ಹಾಗೂ ಚಂದ್ರಶೇಖರ್ಗೆ, ಶ್ರೀನಿವಾಸ್ ವಿಚಾರ ತಲೆಗೆ ಹುಳ ಬಿಟ್ಟಿತ್ತು. ಹೀಗಾಗಿಯೇ ಜೊತೆಗಿದ್ದ ಜಯಲಕ್ಷ್ಮಿ ಮುಗಿಸುವುದಕ್ಕೆ ಮುಂದಾದ ಇಬ್ಬರಲ್ಲಿ ಹೊಸ ಲೆಕ್ಕಾಚಾರ ಶುರುವಾಗಿತ್ತು. ಅಸಲಿಗೆ ಜಯಲಕ್ಷ್ಮಿ ಸರ್ಕಾರಿ ನೌಕರಸ್ಥೆ. ಅವರ ಅಸಹಜ ಸಾವಿನಿಂದ ಮೃತಪಟ್ಟರೆ ಸರ್ಕಾರಿ ನೌಕರಿ ಅನುಕಂಪದಲ್ಲಿ ಸಂಬಂಧಿಕರಿಗೆ ಸಿಗಲಿದೆ. ಹಾಗೆ ಯೋಚನೆ ಮಾಡಿದರೇ ಅದು ದತ್ತು ಮಗ ಚಂದ್ರಶೇಖರ್ನಿಗೆ ಬರಲಿದೆ. ಆದರೆ ಕೊಲೆ ಎಂದು ಗೊತ್ತಾದರೆ ಅದೂ ಸಹ ಕೈತಪ್ಪುತ್ತದೆ ಎಂದು ಯೋಚಿಸಿದವರೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಅದಾಗಲೇ ಮನೆ ಬಿಡಲು ನಿರ್ಧರಿಸಿದ್ದ ಜಯಲಕ್ಷ್ಮಿಯನ್ನ ಮುಗಿಸುವುದಕ್ಕೆ ಸಿದ್ದರಾದ ಅನುಸೂಯ ಹಾಗೂ ಚಂದ್ರಶೇಖರ್ ಇದೇ ಫೆಬ್ರವರಿ 19ರಂದು ರಾತ್ರಿ ತಂತ್ರ ಎಣೆದಿದ್ದರು.
ಇದನ್ನೂ ಓದಿ: ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್: ಮೃತರ ಸಂಬಂಧಿ ಹೇಳಿದ್ದೇನು?
ಅವತ್ತಿನ ರಾತ್ರಿ ಊಟ ಮಾಡಿ ಮಲಗಿದ್ದ ಜಯಲಕ್ಷ್ಮಿ ಬಳಿ ಬಂದ ಇಬ್ಬರು ಆಕೆಯ ಮುಖಕ್ಕೆ ದಿಂಬಿಟ್ಟು ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ರಾತ್ರೋರಾತ್ರಿಯೇ ಸಹೋದರ ರವೀಶ್ ಸೇರಿದಂತೆ ಹಲವರಿಗೆ ಕರೆ ಮಾಡಿ ಕಥೆ ಕಟ್ಟಿದ್ದರು. ಜಯಲಕ್ಷ್ಮಿಗೆ ಹೃದಯಾಘಾತವಾಗಿದೆ. ಮನೆಯಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಮಧ್ಯರಾತ್ರಿ ಜಯಲಕ್ಷ್ಮಿ ಹತ್ಯೆಗೈದ ಇಬ್ಬರು ಬೆಳಗಾಗುವಷ್ಟರಲ್ಲೇ ಮೃತದೇಹವನ್ನು ಕಂಟಲಗೆರೆಗೆ ಸಾಗಿಸಿದ್ದರು. ಅಲ್ಲಿ ಕಾರ್ಯಕ್ಕೂ ಸಹ ಸಿದ್ಧಗೊಳಿಸಿದ್ದರು. ಎಲ್ಲವೂ ಅಂದುಕೊಂಡಂತಾಗಿದೆ ಎಂದು ಹೊರಗೆ ಮೊಸಳೆ ಕಣ್ಣೀರು ಹಾಕುತ್ತ ನಾಟಕವಾಡಿದ್ದ ಇಬ್ಬರ ಸ್ಟೋರಿಗೆ ಶ್ರೀನಿವಾಸ್ ಬ್ರೇಕ್ ಹಾಕಿದ್ದ.
ಅನುಸೂಯ, ಚಂದ್ರಶೇಖರ್ ಬಂಧನ
ಜಯಲಕ್ಷ್ಮಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಬಲ್ಲವನಾಗಿದ್ದ ಶ್ರೀನಿವಾಸ್ಗೆ ಮನೆಯೊಳಗಿದ್ದ ಸಮಸ್ಯೆಗಳು ಸಹ ಅರಿವಿಗಿತ್ತು. ಯಾವಾಗ ಅವರ ಮೃತಪಟ್ಟಿದ್ದಾಳೆಂಬ ಸುದ್ದಿ ಬಂತೋ ಆತ ಅನುಮಾನಗೊಂಡಿದ್ದ. ಕೂಡಲೇ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಆತನ ಮಾಹಿತಿ ಆಧರಿಸಿ ಬಂದ ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ಕೊಲೆಯ ಸಂಗತಿ ಬಯಲಾಗಿದೆ. ಕೂಡಲೇ ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಜಯಲಕ್ಷ್ಮಿ ಮಾಡಿದ ತಪ್ಪಾದರೂ ಏನು, ಕಷ್ಟದಲ್ಲಿದ್ದ ಸಹೋದರಿಗೆ ಆರ್ಥಿಕವಾಗಿ ಹೆಗಲು ಕೊಟ್ಟಿದ್ದು ತಪ್ಪಾ? ಆಕೆಯ ಮಗನಿಗೆ ಶಿಕ್ಷಣ ನೀಡಿದ್ದು ತಪ್ಪಾ? ಎಲ್ಲವನ್ನೂ ಕೊಟ್ಟ ಜಯಲಕ್ಷ್ಮಿ ಅಕ್ಷರಶಃ ಅನುಸೂಯಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದ್ದರು. ಆದರೆ ಅತಿಯಾಸೆಗೆ ಬಿದ್ದ ಅನುಸೂಯ ಜಯಲಕ್ಷ್ಮಿ ಕೊಂದಿದ್ದರು. ಮತ್ತೊಂದೆಡೆ ಇನ್ನು 22 ವರ್ಷದ ಯುವಕ ಚಂದ್ರಶೇಖರ್ ಸಹ ಕೊಲೆ ಆರೋಪಿಯಾಗಿದ್ದಾನೆ. ಆದರೆ ಇದೀಗ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಜೈಲು ಸೇರಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
