ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವ ಮತ್ತೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಮನೆಯೊಳಗೆ ಇ-ಬೈಕ್ ಚಾರ್ಜ್‌ಗೆ ಹಾಕಿ ಮಲಗಿದ್ದ ವೃದ್ಧರೊಬ್ಬರು ಬ್ಯಾಟರಿ ಸ್ಫೋಟಗೊಂಡ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್ ನಿವಾಸಿ ಲೂಥ್ ನಾಥನ್ (62) ಮೃತಪಟ್ಟ ದುರ್ದೈವಿ. ಸೋಮವಾರ ರಾತ್ರಿ ನಾಥನ್ ಅವರು ತಮ್ಮ ಎಲೆಕ್ಟ್ರಿಕ್ ಬೈಕ್ ಅನ್ನು ಮನೆಯ ಹಾಲ್‌ನಲ್ಲಿ ಚಾರ್ಜ್‌ಗೆ ಹಾಕಿ ಅಲ್ಲೇ ಮಲಗಿದ್ದರು. ತಡರಾತ್ರಿ ಚಾರ್ಜ್ ಆಗುತ್ತಿದ್ದ ವೇಳೆ ಬ್ಯಾಟರಿ ದಿಢೀರನೆ ಸ್ಫೋಟಗೊಂಡಿದೆ (Battery Blast). ಸ್ಫೋಟದ ತೀವ್ರತೆಗೆ ಮನೆಯಲ್ಲಿ ಬೆಂಕಿ ಆವರಿಸಿದ್ದು, ಮಲಗಿದ್ದ ನಾಥನ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಉಸಿರುಚೆಲ್ಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಹಲಸೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಟರಿ ಸ್ಫೋಟಕ್ಕೆ ಓವರ್ ಚಾರ್ಜಿಂಗ್ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
