I4C ಮತ್ತು RBIH ಮಧ್ಯೆ ಒಪ್ಪಂದ; ಭಾರತೀಯರಿಗೆ ಅತ್ಯಾಧುನಿಕ ಸೈಬರ್ ರಕ್ಷಾ ಕವಚ: ಅಮಿತ್ ಶಾ ಘೋಷಣೆ – Kannada News | Amit Shah: AI to Boost India’s Cyber Security, Target Mule Accounts with I4C RBIH

ನವದೆಹಲಿ, ಮೇ 12: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಸೈಬರ್ ಸುರಕ್ಷಿತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯನ್ನು ಘೋಷಿಸಿದ್ದಾರೆ. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ I4C (Indian Cyber Crime Coordination Centre) ಮತ್ತು ರಿಸರ್ವ್ ಬ್ಯಾಂಕ್‌ನ ಅಂಗಸಂಸ್ಥೆಯಾದ RBIH (Reserve Bank Innovation Hub) ನಡುವೆ ಮಹತ್ವದ ಒಪ್ಪಂದ (MoU) ಏರ್ಪಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಒಪ್ಪಂದದ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಸೈಬರ್ ಅಪರಾಧ ತಡೆಯಲು ಮೂಲ್ ಅಕೌಂಟ್​ಗಳು ದೊಡ್ಡ ತಡೆ ಎನಿಸಿವೆ. ಗೃಹ ಸಚಿವಾಲಯದಡಿ ಬರುವ ಐ4ಸಿ ಮತ್ತು ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಮಧ್ಯೆ ತಿಳಿವಳಿಕೆ ಒಪ್ಪಂದ (ಎಂಒಯು) ಆಗಿದ್ದು, ಸೈಬರ್ ಅಪರಾಧ ಎದುರಿಸಲು ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಬಳಸುವ ಪ್ರಯತ್ನವಾಗಲಿದೆ. ಐ4ಸಿಯ ಸಸ್ಪೆಕ್ಟ್ ರಿಜಿಸ್ಟ್ರಿಯಲ್ಲಿರುವ ಡೇಟಾವನ್ನು ಎಐ ಶಕ್ತ ವಂಚನೆ ಪತ್ತೆ ವ್ಯವಸ್ಥೆಗೆ ಪೂರೈಕೆ ಮಾಡುವ ಮೂಲಕ ಮೂಲ್ ಅಕೌಂಟ್​ಗಳನ್ನು ಕ್ಷಿಪ್ರವಾಗಿ ಪತ್ತೆ ಮಾಡಿ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ. ಸೈಬರ್ ಅಪರಾಧದ ವಿರುದ್ಧ ಹೊಸ ತಲೆಮಾರಿನ ಕವಚವಾಗಿ ಈ ವ್ಯವಸ್ಥೆ ನೆರವಾಗಲಿದೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಟ್ವೀಟ್

ಸರಳವಾಗಿ ಹೇಳುವುದಾದರೆ, ಸೈಬರ್ ವಂಚಕರನ್ನು ಪತ್ತೆಹಚ್ಚಲು ಸರ್ಕಾರ ಈಗ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನವನ್ನು ಬಳಸುತ್ತಿದೆ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ನಡೆಯುವ ಅಕ್ರಮಗಳನ್ನು ಕ್ಷಣಾರ್ಧದಲ್ಲಿ ಗುರುತಿಸಿ, ವಂಚನೆ ನಡೆಯುವ ಮೊದಲೇ ಅದನ್ನು ತಡೆಯುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶ.

‘ಮ್ಯೂಲ್ ಅಕೌಂಟ್ಸ್’ (Mule Accounts) ಎಂದರೆ ಏನು?

ಸೈಬರ್ ಅಪರಾಧಗಳಲ್ಲಿ ದೊಡ್ಡ ಅಡ್ಡಿಯಾಗಿರುವುದು ಈ ‘ಮ್ಯೂಲ್ ಅಕೌಂಟ್ಸ್’. ಇವು ಬೇರೆಯವರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಾಗಿದ್ದು, ವಂಚಕರು ತಾವು ಲೂಟಿ ಮಾಡಿದ ಹಣವನ್ನು ವರ್ಗಾಯಿಸಲು ಇವುಗಳನ್ನು ಬಳಸುತ್ತಾರೆ.

ಇದನ್ನೂ ಓದಿ: ಷೇರುಬಜಾರು ಅಲುಗಾಟ, 4-5 ದಿನದಲ್ಲಿ ಹೂಡಿಕೆದಾರರಿಗೆ 11 ಲಕ್ಷ ಕೋಟಿ ರೂ ನಷ್ಟ; ಬೇರೆ ದೇಶಗಳಲ್ಲಿ ಹೆಚ್ಚಿದರೂ ಭಾರತದಲ್ಲಿ ಕುಸಿತ ಯಾಕೆ?

ಉದಾಹರಣೆಗೆ, ಸಾಮಾನ್ಯ ಜನರಿಗೆ ಹಣದ ಆಮಿಷ ಒಡ್ಡಿ ಅವರ ಖಾತೆಯನ್ನು ವಂಚನೆಗೆ ಬಳಸಿಕೊಳ್ಳಲಾಗುತ್ತದೆ. ಹಣ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವೇಗವಾಗಿ ವರ್ಗಾವಣೆಯಾಗುವುದರಿಂದ ಪೊಲೀಸರಿಗೆ ವಂಚಕರನ್ನು ಹಿಡಿಯುವುದು ಕಷ್ಟವಾಗುತ್ತಿತ್ತು.

ಈ ಒಪ್ಪಂದದಿಂದ ಆಗುವ ಲಾಭವೇನು?

I4C ಬಳಿ ಈಗಾಗಲೇ ಸೈಬರ್ ಅಪರಾಧಿಗಳ ಮತ್ತು ಸಂಶಯಾಸ್ಪದ ಖಾತೆಗಳ ಪಟ್ಟಿ (Suspect Registry) ಇದೆ. ಈ ಮಾಹಿತಿಯನ್ನು RBIH ನ AI ವ್ಯವಸ್ಥೆಗೆ ನೀಡಲಾಗುತ್ತದೆ.

ಕೃತಕ ಬುದ್ಧಿಮತ್ತೆಯು ಬ್ಯಾಂಕ್ ವ್ಯವಹಾರಗಳನ್ನು ನಿರಂತರವಾಗಿ ಗಮನಿಸುತ್ತದೆ. ಯಾವುದಾದರೂ ಖಾತೆಯಲ್ಲಿ ಅಸಹಜವಾಗಿ ಹಣದ ವರ್ಗಾವಣೆ ನಡೆಯುತ್ತಿದ್ದರೆ, ಅದು ಕೂಡಲೇ ಎಚ್ಚರಿಕೆ ನೀಡುತ್ತದೆ.

ಸಂಶಯಾಸ್ಪದ ‘ಮ್ಯೂಲ್’ ಖಾತೆಗಳನ್ನು ಗುರುತಿಸಿ ಅವುಗಳನ್ನು ತಕ್ಷಣವೇ ಸ್ಥಗಿತಗೊಳಿಸಲು (Block) ಈ ವ್ಯವಸ್ಥೆ ಸಹಕಾರಿಯಾಗಲಿದೆ.

ಇದನ್ನೂ ಓದಿ: ತೈಲ ಶೋಧಕರಿಗೆ ರಾಯಲ್ಟಿ ರಿಯಾಯಿತಿ; ಇಂಧನ ಕೊರತೆ ಕಡಿಮೆ ಮಾಡಲು ಸರ್ಕಾರ ಕಸರತ್ತು

ಸಾಮಾನ್ಯ ನಾಗರಿಕರಿಗೆ ಇದು ಹೇಗೆ ರಕ್ಷಣೆ ನೀಡುತ್ತದೆ?

ನಿಮ್ಮ ಕಷ್ಟದ ಹಣವನ್ನು ಯಾರೋ ವಂಚಕರು ಡಿಜಿಟಲ್ ಮೂಲಕ ದೋಚಲು ಪ್ರಯತ್ನಿಸಿದರೆ, ಈ ಹೊಸ ‘ನೆಕ್ಸ್ಟ್ ಜೆನ್ ಶೀಲ್ಡ್’ (Next Gen Shield) ಅಥವಾ ಆಧುನಿಕ ರಕ್ಷಣಾ ಕವಚವು ಅದನ್ನು ತಡೆಯಲು ಕೆಲಸ ಮಾಡುತ್ತದೆ. ಇದು ಸೈಬರ್ ಲೋಕದಲ್ಲಿ ಭಾರತೀಯ ನಾಗರಿಕರಿಗೆ ಸಿಗಲಿರುವ ಹೊಸ ಭದ್ರತಾ ಕೋಟೆಯಾಗಿದೆ.

ಸರ್ಕಾರದ ಈ ಕ್ರಮವು ಸೈಬರ್ ಅಪರಾಧಿಗಳ ಜಾಲವನ್ನು ಧ್ವಂಸಗೊಳಿಸಲು ಮತ್ತು ಡಿಜಿಟಲ್ ವಹಿವಾಟನ್ನು ಸುರಕ್ಷಿತವಾಗಿಸಲು ಸಹಕಾರಿಯಾಗಲಿದೆ. ಅಮಿತ್ ಶಾ ಅವರು ಹೇಳಿದಂತೆ, ಇದು “ಸೈಬರ್ ಸುರಕ್ಷಿತ ಭಾರತ” ನಿರ್ಮಾಣದತ್ತ ಇಟ್ಟ ಭರವಸೆಯ ಹೆಜ್ಜೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:49 pm, Tue, 12 May 26

Source link

Leave a Reply

Your email address will not be published. Required fields are marked *