ಬೆಂಗಳೂರು, ಮೇ 15: ಇಂಧನ, ಅಗತ್ಯ ಸಾಮಾಗ್ರಿಗಳ ಬೆಲೆಯೇರಿಕೆಯಿಂದ (Price Hike) ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್ ಮಾಲೀಕರು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಬಸ್ ಟಿಕೆಟ್ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಶೇ.20-30ರಷ್ಟು ದರ ಏರಿಕೆಯಾಗಲಿದ್ದು, ಬೆಲೆ ಏರಿಕೆ ಅಬ್ಬರದ ಪರಿಣಾಮ ಈಗಾಗಲೇ ಸೋತು ಸುಣ್ಣವಾಗಿರುವ ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ.
ಮುಖ್ಯಾಂಶಗಳು
- ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್
- ಇಂದು ಮಧ್ಯರಾತ್ರಿಯಿಂದ ಖಾಸಗಿ ಬಸ್ಗಳ ಟಿಕೆಟ್ ದರವೂ ಹೆಚ್ಚಳ
- ಶೇ.20-30ರಷ್ಟು ದರ ಏರಿಕೆ ಬಗ್ಗೆ ಮಾಹಿತಿ ನೀಡಿದ ಬಸ್ ಮಾಲಕರು
ಖಾಸಗಿ ಬಸ್ ಮಾಲೀಕರು ಹೇಳೋದೇನು?
ಬಸ್ ಒಂದಕ್ಕೆ ಪ್ರತಿದಿನ ಕನಿಷ್ಠ 150 ಲೀಟರ್ ಡಿಸೇಲ್ ಹಾಕಿಸುತ್ತೇವೆ. ಇಂಧನ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವ ಕಾರಣ 450 ರೂಪಾಯಿ ಹೆಚ್ಚುವರಿಯಾಗಿ ನಮಗೆ ಹೊರೆಯಾಗಲಿದೆ. ಹೀಗಾಗಿ ಟಿಕೆಟ್ಗಳ ದರ ಏರಿಸೋದು ನಮಗೂ ಅನಿವಾರ್ಯವಾಗಿದೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಉಂಟಾಗಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಿಎನ್‌ಜಿ ಕೆಜಿಗೆ 2 ರೂಪಾಯಿ ಹೆಚ್ಚಳ
ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬಗ್ಗೆ ಇಂದು (ಮೇ 15) ಬೆಳಿಗ್ಗೆಯಷ್ಟೇ ತೈಲ ಕಂಪನಿಗಳು ಘೋಷಣೆ ಮಾಡಿದ್ದವು. ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಲೀಟರ್ಗೆ 3 ರೂಪಾಯಿಗೂ ಹೆಚ್ಚು ಏರಿಕೆ ಕಂಡಿತ್ತು. ಅದರ ಅನ್ವಯ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 3.27 ರೂಪಾಯಿ ಏರಿಕೆಯಾಗಿದ್ದು, ಡಿಸೇಲ್ ಬೆಲೆ ಲೀಟರ್ಗೆ 3.12 ರೂಪಾಯಿ ಹೆಚ್ಚಳವಾಗಿತ್ತು. ಆ ಬೆನ್ನಲ್ಲೇ ದೇಶಾದ್ಯಂತ ಸಿಎನ್‌ಜಿ (CNG) ದರವನ್ನೂ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಿರುವ ಬಗ್ಗೆ ಘೋಷಣೆಯಾಗಿತ್ತು. ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ (Hormuz Blockade) ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಪರಿಣಾಮ ಇಂಧನಗಳ ಪೂರೈಕೆ ವ್ಯತ್ಯಯವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
