ಬೆಳಗಾವಿ, ಆಗಸ್ಟ್ 06: ಕೆಎಸ್‌ಆರ್‌ಟಿಸಿ (KSRTC) ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವಂತಹ (death) ದಾರುಣ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ನಡೆದಿದೆ. ಸೈಫ್ ಮುಲ್ಲಾ (29), ಅವರ ನಾಲ್ಕು ವರ್ಷದ ಪುತ್ರಿ ಸಿಜಾ ಸೈಫ್ ಮುಲ್ಲಾ ಹಾಗೂ ಸ್ನೇಹಿತ ಇಮ್ತಿಯಾಜ್ ಬಡಗಾಂವ್ (35) ಮೃತ ದುರ್ದೈವಿಗಳು.
ನಡೆದಿದ್ದೇನು?
ಹಿಡಕಲ್‌ನಿಂದ ಗೋಕಾಕ್ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಗೋಕಾಕ್ ಫಾಲ್ಸ್‌ನಿಂದ ಕೊಣ್ಣೂರಿನತ್ತ ಬೈಕ್‌ನಲ್ಲಿ ತಂದೆ, ಮಗಳು ಮತ್ತು ಸ್ನೇಹಿತ ಪ್ರಯಾಣಿಸುತ್ತಿದ್ದರು. ಈ ವೇಳೆ ಕೊಣ್ಣೂರು ಪಟ್ಟಣದ ಕರೆಮ್ಮಾ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ನುಗ್ಗಿದ ಆಗಂತುಕರು: ಚಾಕು ಹಿಡಿದು ಓಡಾಟ, CCTVಯಲ್ಲಿ ದೃಶ್ಯ ಸೆರೆ
ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್, ಬೊಲೆರೊ, ಬೈಕ್ ನಡುವೆ ಸರಣಿ ಅಪಘಾತ: ಯುವಕ ಸಾವು; ಇಬ್ಬರಿಗೆ ಗಂಭೀರ ಗಾಯ
ಬಸ್, ಬೊಲೆರೊ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಮೇಲ್ಕುಂಟೆ ಗೇಟ್ ಬಳಿ ನಡೆದಿದೆ. ಶಿರಾ ಪಟ್ಟಣದ ಕೋಟೆ ನಿವಾಸಿ ಇಮ್ರಾನ್ (23) ಮೃತ ದುರ್ದೈವಿ. ಘಟನೆಯಲ್ಲಿ ನವಾಜ್ ಹಾಗೂ ಅಲ್ಲಾಭಕ್ಷ್ ತೀವ್ರ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ
ಮೇಲ್ಕುಂಟೆ ಗೇಟ್ ಬಳಿ ಬಸ್, ಬೊಲೆರೊ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇನ್ನು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:49 pm, Thu, 6 August 26
