ಮಂಗಳೂರು, ಜುಲೈ 08: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆ ಕಾಮಗಾರಿ ವೇಳೆ ನಡೆದ ಅವೈಜ್ಞಾನಿಕ ನಿರ್ಮಾಣವು ಭೂಕುಸಿತಕ್ಕೆ ಕಾರಣವಾಗಿದೆ. ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡವನ್ನು ಲಂಬಾಕೃತಿಯಲ್ಲಿ ಅಗೆದಿರುವುದು ಪ್ರತಿ ಮಳೆಗಾಲದಲ್ಲೂ ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತಿದೆ. ಕೇರಳದ ವಯನಾಡ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವಾಗ ದುರಂತಕ್ಕೆ ಕಾರಣವಾದ DBL ಕಂಪನಿಯೇ ಈ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ ಎನ್ನಲಾಗಿದೆ. ಕಂಪನಿಯ ಅವೈಜ್ಞಾನಿಕ ವಿಧಾನಗಳಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದೆ. ಈ ಬಾರಿ ಮಣ್ಣು ರಸ್ತೆಗೆ ಕುಸಿದು ಒಂದು ಬದಿಯ ಸಂಚಾರವನ್ನು ಬಂದ್ ಮಾಡಲಾಗಿದೆ. ಕೇವಲ ಒಂದು ಪಥದಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಮಾಡಿದ ಸಾಯಿಲ್ ನೇಲಿಂಗ್ ವಿಧಾನವೂ ವಿಫಲವಾಗಿದ್ದು, ಪ್ರಸ್ತುತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆತ್ತಿಕಲ್ ಮಾತ್ರವಲ್ಲದೆ, ಹೆದ್ದಾರಿಯ ಇತರ ಭಾಗಗಳಲ್ಲೂ ಇದೇ ರೀತಿಯ ಅವೈಜ್ಞಾನಿಕ ಅಗೆತ ನಡೆಸಲಾಗಿದೆ. ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದರೆ, ಕೆಳಭಾಗದ 200ಕ್ಕೂ ಹೆಚ್ಚು ಮನೆಗಳು ಮತ್ತು ಗ್ರಾಮಗಳಿಗೆ ಅಪಾಯವಿದೆ. ಕಳೆದ ವರ್ಷ 12 ಮನೆಗಳನ್ನು ಸ್ಥಳಾಂತರಿಸಲಾಗಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
