ಮಕ್ಕಳ ಸಾವು ಬಯಸಿದ ಟ್ರೋಲರ್ಸ್; ಆಕ್ರೋಶ ಹೊರಹಾಕಿದ ಗಾಯಕಿ ಚಿನ್ಮಯಿ ಶ್ರೀಪಾದ – Kannada News | Singer Chinmayi Sripaada slams Trolls wishing death of Kids after Ketan Agarwal case

ಖ್ಯಾತ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripaada) ಹಾಗೂ ಅವರ ಪತಿ, ನಟ-ನಿರ್ದೇಶಕ ರಾಹುಲ್ ರವೀಂದ್ರನ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭೀಕರ ಆನ್‌ಲೈನ್ ದ್ವೇಷಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ನಡೆದ ಕೇತನ್ ಅಗರ್ವಾಲ್‌ (Ketan Agarwal) ಕೊಲೆ ಪ್ರಕರಣದ ಬಗ್ಗೆ ರಾಹುಲ್ ರವೀಂದ್ರನ್ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾದ ಟ್ರೋಲರ್‌ಗಳು, ಅವರ 3 ವರ್ಷದ ಅವಳಿ ಮಕ್ಕಳ ಸಾವನ್ನು ಬಯಸುವ ಮಟ್ಟಿಗೆ ಕ್ರೌರ್ಯ ಮೆರೆದಿದ್ದಾರೆ. ಇದರಿಂದ ಬೇಸತ್ತು ರಾಹುಲ್ ಎಕ್ಸ್ (ಟ್ವಿಟರ್) ಖಾತೆಯನ್ನೇ ಡಿಲೀಟ್ ಮಾಡಿದ್ದರೆ, ಗಾಯಕಿ ಚಿನ್ಮಯಿ ಮಾತ್ರ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ.

ವಿಡಿಯೋ ಮೂಲಕ ಕಿಡಿಕಾರಿದ ಚಿನ್ಮಯಿ

ತಮ್ಮ ಇಡೀ ಕುಟುಂಬ ಎದುರಿಸುತ್ತಿರುವ ನಿಂದನೆಗಳ ಬಗ್ಗೆ ಚಿನ್ಮಯಿ ಶ್ರೀಪಾದ ಅವರು ಎಕ್ಸ್ ಖಾತೆಯಲ್ಲಿ 7 ನಿಮಿಷಗಳ ಸುದೀರ್ಘ ವಿಡಿಯೋ ಹಂಚಿಕೊಂಡಿದ್ದಾರೆ. ‘ನನ್ನ ಮಗ ಸಾಯಲಿ ಎಂದು ಪ್ರಾರ್ಥಿಸುವುದಾಗಿ ಒಬ್ಬ ಟ್ವೀಟ್ ಮಾಡಿದ್ದ. ಅಷ್ಟೇ ಅಲ್ಲದೆ, ತನ್ನ ಭಜನಾ ಮಂಡಳಿಯನ್ನು ಕರೆದು ನನ್ನ ಮಗನ ಸಾವಿಗೆ ಒಟ್ಟಾಗಿ ಪ್ರಾರ್ಥಿಸುವಂತೆ ಕೋರಿದ್ದ. ಇದನ್ನು ನೋಡಿದ ತಕ್ಷಣ ರಾಹುಲ್ ಸಹನೆ ಕಳೆದುಕೊಂಡರು’ ಎಂದು ಚಿನ್ಮಯಿ ಹೇಳಿದ್ದಾರೆ.

‘ಅತ್ಯಂತ ಭಯಾನಕವಾದ ಜೀವನ ಸಿಗಲಿ’

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಮಹಿಳಾದ್ವೇಷ, ಅತ್ಯಾಚಾರದ ಸಂಸ್ಕೃತಿ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ಅವರು, ‘ಆನ್‌ಲೈನ್‌ನಲ್ಲಿ ನಿಂದಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಅಮಾಯಕ ಮಕ್ಕಳನ್ನು ಮಧ್ಯೆ ತರುವುದು ಎಲ್ಲಾ ಮಿತಿಗಳನ್ನು ಮೀರಿದಂತಾಗಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ‘ನನ್ನ ಮಕ್ಕಳಾದ ಶ್ರವಸ್ ಮತ್ತು ದೃಪ್ತಾರನ್ನು ಗುರಿಯಾಗಿಸಿಕೊಂಡು ನಿಂದಿಸುವವರಿಗೆ ನಾನು ಒಂದೇ ಹೇಳಲು ಬಯಸುತ್ತೇನೆ. ನೀವು ನನ್ನ ಮಕ್ಕಳನ್ನು ನಿಂದಿಸಿದರೆ, ನಿಮಗೆ ಸುದೀರ್ಘವಾದ ಆದರೆ ಅತ್ಯಂತ ಭಯಾನಕವಾದ ಜೀವನ ಸಿಗಲಿ ಎಂದು ನಾನು ಹಾರೈಸುತ್ತೇನೆ’ ಎಂದು ಚಿನ್ಮಯಿ ಎಚ್ಚರಿಕೆ ನೀಡಿದ್ದಾರೆ.

ಸ್ಕ್ರೀನ್‌ಶಾಟ್ ಹಂಚಿಕೊಂಡ ಗಾಯಕಿ

ಬುಧವಾರ (ಜುಲೈ 8) ತಮ್ಮ ಎಕ್ಸ್ ಖಾತೆಯಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಚಿನ್ಮಯಿ, ‘ಕೆಲವು ತೆಲುಗು ಸೋಷಿಯಲ್ ಮೀಡಿಯಾ ಬಳಕೆದಾರರು ನನ್ನ ಮಕ್ಕಳ ಸಾವನ್ನು ಬಯಸುತ್ತಿದ್ದಾರೆ. ನಾನು ಮಹಿಳಾ ಹಕ್ಕುಗಳ ಪರವಾಗಿ ಧ್ವನಿ ಎತ್ತುವುದರಿಂದ ಅವರು ನನ್ನನ್ನು ಆ್ಯಂಟಿ-ಫೆಮಿನಿಸ್ಟ್ ಎಂದು ಕರೆಯುತ್ತಾ ದ್ವೇಷಿಸುತ್ತಿದ್ದಾರೆ. ಇಂತಹ ಸೈಕೋಪಾತ್‌ಗಳಿಗೆ ನಾನು ಅದೇ ಧಾಟಿಯಲ್ಲಿ ಉತ್ತರ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ನಾಮನ ಕಿರುಕುಳದ ಬಗ್ಗೆ ಹೇಳಿದ್ದೇ ತಪ್ಪಾಯ್ತು; ಗಾಯಕಿಯ ಬೆತ್ತಲೆ ಫೋಟೋ ಹರಿಬಿಟ್ಟ ಕಿಡಿಗೇಡಿಗಳು

ಇದಕ್ಕೂ ಮುನ್ನ ರಾಹುಲ್ ರವೀಂದ್ರನ್ ಟ್ವಿಟರ್ ತೊರೆಯುವಾಗ, ‘ಬಹುಶಃ ನಾನು ಅತಿಯಾಗಿ ಪ್ರತಿಕ್ರಿಯಿಸುತ್ತಿರಬಹುದು, ಅಥವಾ ನನ್ನದೇ ತಪ್ಪಿರಬಹುದು. ಆದರೆ ಈ ದ್ವೇಷವನ್ನು ಸಹಿಸಲು ಸಾಧ್ಯವಿಲ್ಲ. ಆ ಟ್ವೀಟ್ ಓದಿದ ಅರ್ಧ ಗಂಟೆಯ ನಂತರ ನನಗಾದ ಮಾನಸಿಕ ಆಘಾತದಿಂದಾಗಿ ಈ ಆ್ಯಪ್ ಅನ್ನು ಡಿಲೀಟ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *