ಅಂಗಾಂಗ ದಾನ ಮಾಡಿದ ಪೋಷಕರುImage Credit source: tv9 kannada
ಆನೇಕಲ್, ಜುಲೈ 18: ಮಗನನ್ನು ಕಳೆದುಕೊಂಡ ನೋವು ಒಂದೆಡೆ, ಮಗನ ಅಂಗಾಂಗ ದಾನದ (Organ Donation) ಮೂಲಕ ಹಲವು ಜೀವಗಳಿಗೆ ಹೊಸ ಬದುಕು ನೀಡಿದ ಹೆಮ್ಮೆ ಮತ್ತೊಂದೆಡೆ. ರ‍್ಯಾಂಕ್ ವಿದ್ಯಾರ್ಥಿಯಾಗಿದ್ದ 19 ವರ್ಷದ ಸಂಜನ್, ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಬಳಿಕ, ಕುಟುಂಬ ತೆಗೆದುಕೊಂಡ ಮಾನವೀಯ ನಿರ್ಧಾರ ಇದೀಗ ಹಲವರಿಗೆ ಜೀವ ದಾನವಾಗಿದೆ. ಆನೇಕಲ್‌ನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ಈ ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ.
ಬೆಂಗಳೂರಿನ ರಾಜಾಜಿನಗರದ ನಿವಾಸಿ 19 ವರ್ಷದ ಸಂಜನ್, ರ‍್ಯಾಂಕ್ ವಿದ್ಯಾರ್ಥಿಯಾಗಿದ್ದ. ದೊಡ್ಡ ಉದ್ಯಮಿಯಾಗುವ ಕನಸು ಹೊತ್ತಿದ್ದ. ತಂದೆ ನಡೆಸುತ್ತಿದ್ದ ಆಟೋಮೊಬೈಲ್ ಸ್ಪೇರ್ ತಯಾರಿಕಾ ಸಂಸ್ಥೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಕನಸು ಕಂಡಿದ್ದ. ಆದರೆ ವಿಧಿಯಾಟ ಬೇರೆ ಇತ್ತು.
ನಡೆದಿದ್ದೇನು?
ಜುಲೈ 8ರಂದು ಕುಟುಂಬದೊಂದಿಗೆ ತಿರುಚ್ಚಂದೂರು ಮುರುಗನ್ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ರಾಯಕೋಟೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಸಂಜನ್ ಹಾಗೂ ಅವರ ಅಜ್ಜಿ ಸುಬ್ಬಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದರು. ಸಂಜನ್ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ತಮಿಳುನಾಡು ಪೊಲೀಸರು ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ಸುಮಾರು ಅರ್ಧ ಗಂಟೆ ವಿಳಂಬ ಮಾಡಿದ್ದರು. ಬಳಿಕ ಮೀರಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅಲ್ಲಿಂದ ಹೊಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ನಂತರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಸಂಜನ್ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದರು.
ಮಗನ ಅಂಗಾಂಗ ದಾನ ಮಾಡಿದ ಹೆತ್ತವರು
ಏಕೈಕ ಮಗನನ್ನು ಕಳೆದುಕೊಳ್ಳುವ ನೋವಿನಲ್ಲಿದ್ದ ತಂದೆ ಲೋಕೇಶ್ ಹಾಗೂ ತಾಯಿ ಶ್ವೇತಾ, ದುಃಖದ ನಡುವೆಯೂ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಗನ ಅಂಗಾಂಗ ದಾನಕ್ಕೆ ನಿರ್ಧರಿಸಿದರು. ಸಂಜನ್ ಕಣ್ಣು, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ದಾನ ಮಾಡಲಾಗಿದೆ. ಈ ಅಂಗಾಂಗ ದಾನದ ಮೂಲಕ ಏಳರಿಂದ ಎಂಟು ಜನರಿಗೆ ಹೊಸ ಬದುಕಿನ ಆಶಾಕಿರಣ ಮೂಡಿದೆ. ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊತ್ತಿದ್ದ ಸಂಜನ್ ಇಂದು ಇಲ್ಲದಿದ್ದರೂ, ಅವರ ಅಂಗಾಂಗಗಳು ಹಲವು ಜೀವಗಳಲ್ಲಿ ಹೊಸ ಉಸಿರಾಗಿದೆ. ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬದ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದೆ.
ಇದನ್ನೂ ಓದಿ: ತುಂಗಾ ತುಂಬಿ ಹರಿಯುತ್ತಿದ್ದರೂ ಶಿವಮೊಗ್ಗದಲ್ಲಿ ನೀರಿಗೆ ಹಾಹಾಕಾರ: ನೀರಿಗಾಗಿ ಜೀವದ ಹಂಗು ತೊರೆದ ಜನರು
ಒಂದೆಡೆ ಮಗನನ್ನು ಕಳೆದುಕೊಂಡ ದುಃಖ. ಮತ್ತೊಂದೆಡೆ ಮಗನ ಅಂಗಾಂಗ ದಾನದ ಮೂಲಕ ಹಲವರಿಗೆ ಹೊಸ ಬದುಕು ನೀಡಿದ ತೃಪ್ತಿ. ಸಂಜನ್ ಅವರ ಕುಟುಂಬದ ಈ ಮಾನವೀಯ ನಿರ್ಧಾರ ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಮಾಜಕ್ಕೆ ಸಾರಿದೆ. ಕಣ್ಣೀರಿನ ನಡುವೆಯೂ ಬದುಕಿನ ಬೆಳಕು ಹಂಚಿದ ಸಂಜನ್ ಕುಟುಂಬದ ಈ ನಿರ್ಧಾರ ನಿಜಕ್ಕೂ ಎಲ್ಲರಿಗೂ ಮಾದರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
