ಬೆಂಗಳೂರು, ಜುಲೈ 17: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ (HD Devegowda) ಪತ್ನಿ ಚನ್ನಮ್ಮ (85) ನಿಧನ ಹೊಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಜುಲೈ 15ರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 18) ಕೊನೆಯುಸಿರೆಳೆದಿದ್ದಾರೆ.
ಕಳೆದ 2-3 ವರ್ಷಗಳಿಂದಲೂ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಈ ನಡುವೆ ಬುಧವಾರ ಚನ್ನಮ್ಮನವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯ ಡಾ.ಸತ್ಯನಾರಾಯಣ ಚನ್ನಮ್ಮನವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಂತಿಮವಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.
ದೇವೇಗೌಡರ ಬೆನ್ನೆಲುಬಾಗಿದ್ದ ಚನ್ನಮ್ಮ
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚನ್ನಮ್ಮ ಅವರು 1954 ಮೇ 25ರಂದು ಹೆಚ್.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ಒಟ್ಟು ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಚನ್ನಮ್ಮ ದೇವೇಗೌಡರ ರಾಜಕೀಯ ಜೀವನದ ಬೆನ್ನೆಲುಬಿನಂತಿದ್ದು, ಸದಾ ಕಾಲ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಹೊರೆ ಬೀಳದಂತೆ ಸಂಸಾರ ನಿಭಾಯಿಸುವ ಮೂಲಕ ಗಟ್ಟಿಗಿತ್ತಿ ಎನಿಸಿಕೊಂಡಿದ್ದರು. ಆರು ಮಕ್ಕಳನ್ನ ಸಲಹಿದ್ದಲ್ಲದೆ, ಅವರ ಶಿಕ್ಷಣದ ಜವಾಬ್ದಾರಿ ಹೊತ್ತು ಆದರ್ಶ ಗೃಹಿಣಿಯಾಗಿದ್ದರು.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ಚನ್ನಮ್ಮ ಅವರ ಮೇಲೆ ನಡೆದಿತ್ತು ಆ್ಯಸಿಡ್ ದಾಳಿ!
2001ರ ಫೆಬ್ರವರಿ ತಿಂಗಳಲ್ಲಿ ಚನ್ನಮ್ಮ ಅವರು ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ದೇವೇಗೌಡ ಮತ್ತು ಕಾಳಮ್ಮ ದಂಪತಿಯ ಪುತ್ರಿಯ ಹಿರಿಯ ಮಗಳಾಗಿದ್ದ ಚನ್ನಮ್ಮ, ಅಂದಿನ ಕಾಲದಲ್ಲೇ SSLC ವರೆಗೆ ಶಿಕ್ಷಣ ಪೂರೈಸಿದ್ದರು. ಮನೆಯ ಹಿರಿಯ ಮಗಳಾಗಿ ನಾಲ್ವರು ತಮ್ಮಂದಿರು ಮತ್ತು ಮೂವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
