ಅರಿಜಿತ್ ಸಿಂಗ್ (Arijit Singh) ಭಾರತದ ಸೂಪರ್ ಸ್ಟಾರ್ ಗಾಯಕ. ಅವರಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಾಯಕ ಪ್ರಸ್ತುತ ಭಾರತದಲ್ಲಿಲ್ಲ. ಹಲವಾರು ಅದ್ಭುತ ಹಾಡುಗಳಿಗೆ ಧ್ವನಿ ನೀಡಿರುವ ಅರಿಜಿತ್, ಸಾವಿರಾರು ಹಿಟ್ ಹಾಡುಗಳನ್ನು ಹಾಡಿದ್ದಾರೆ. ಆದರೆ ಕೆಲ ತಿಂಗಳ ಹಿಂದೆ ಅರಿಜಿತ್ ಸಿಂಗ್ ಅವರು ಅಚಾನಕ್ಕಾಗಿ ಗಾಯನಕ್ಕೆ ನಿವೃತ್ತಿ ಘೋಷಣೆ ಮಾಡಿದರು. ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ಹಾಡುವುದಿಲ್ಲ ಎಂದಿದ್ದರು. ಸ್ಟಾರ್ ನಟ ಆಮಿರ್ ಖಾನ್ ಸೇರಿ ಇನ್ನೂ ಹಲವರು ಅವರ ಮನವೊಲಿಸಲು ಯತ್ನಿಸಿದರಾದರೂ ಸಫಲರಾಗಿರಲಿಲ್ಲ. ಆದರೆ ಇದೀಗ ಅರಿಜಿತ್ ಸಿಂಗ್ ತಮ್ಮ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.
‘ಆವಾರಾಪನ್ 2’ ಸಿನಿಮಾಕ್ಕಾಗಿ ಅರಿಜಿತ್ ಸಿಂಗ್ ತಮ್ಮ ನಿವೃತ್ತಿ ಮುರಿದಿದ್ದಾರೆ ಎನ್ನಲಾಗುತ್ತಿದೆ. 2007 ರಲ್ಲಿ ಬಿಡುಗಡೆ ಆಗಿದ್ದ ಇಮ್ರಾನ್ ಹಶ್ಮಿ ನಟನೆಯ ‘ಆವಾರಾಪನ್’ ಸಿನಿಮಾದ ಎರಡನೇ ಭಾಗ ಇದೀಗ ನಿರ್ಮಾಣವಾಗಿದೆ. 2007ರ ‘ಆವಾರಾಪನ್’ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಇದೀಗ ‘ಆವಾರಾಪನ್ 2’ ಸಿನಿಮಾದ ಹಾಡುಗಳ ಮೇಲೆ ವಿಶೇಷ ಕಾಳಜಿಯನ್ನು ವಹಿಸಲಾಗಿದ್ದು, ಇದೇ ಕಾರಣಕ್ಕೆ ಅರಿಜಿತ್ ಸಿಂಗ್ ಅವರಿಂದಲೇ ಹಾಡು ಹಾಡಿಸಲಾಗಿದೆ.
ಇದನ್ನೂ ಓದಿ:ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್
ಅರಿಜಿತ್ ಸಿಂಗ್ ಹಾಡಿರುವ ‘ಆವಾರಾಪನ್ 2’ ಸಿನಿಮಾದ ಹಾಡು ಇಂದು ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮುಂಚೆಯೇ ಹಾಡು ಸೂಪರ್ ಹಿಟ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾಕ್ಕೆ ಅಮಾಲ್ ಮಲ್ಲಿಕ್ ಸಂಗೀತ ನೀಡಿದ್ದು, ಕೆಲವು ಮಧುರವಾದ ಹಾಡುಗಳನ್ನು ಸಿನಿಮಾಕ್ಕಾಗಿ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದಾರೆ.
‘ಆವಾರಾಪನ್ 2’ ಸಿನಿಮಾನಲ್ಲಿ ಇಮ್ರಾನ್ ಹಶ್ಮಿ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2007 ರ ‘ಆವಾರಾಪನ್’ ಸಿನಿಮಾದ ಮ್ಯಾಜಿಕ್ ಅನ್ನೇ ಪುನರ್ಸೃಷ್ಟಿಸಲು ಚಿತ್ರತಂಡ ಯತ್ನಿಸುತ್ತಿದೆ. ‘ಆವಾರಾಪನ್’ ಸಿನಿಮಾದ ಹಾಡುಗಳಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇದೀಗ ಅದೇ ಮ್ಯಾಜಿಕ್ ಅನ್ನು ‘ಆವಾರಾಪನ್ 2’ ಸಿನಿಮಾ ಮಾಡುತ್ತದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
