
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರಿಗೆ ಎಲ್ಲ ವಯಸ್ಸಿನ ಅಭಿಮಾನಿಗಳು ಇದ್ದಾರೆ. ಈ ಜೋಡಿಯನ್ನು ಕೋಟ್ಯಂತರ ಮಂದಿ ಇಷ್ಟಪಡುತ್ತಾರೆ. ಪುಟ್ಟ ಮಕ್ಕಳು ಕೂಡ ಇವರಿಗೆ ಫ್ಯಾನ್ ಆಗಿದ್ದಾರೆ. ಇತ್ತೀಚೆಗೆ ವಿಜಯ್ ಮತ್ತು ರಶ್ಮಿಕಾ ಅವರು ರಾಜಸ್ಥಾನದ ಉದಯಪುರದಲ್ಲಿ ಮದುವೆ ಮಾಡಿಕೊಂಡರು. ನಂತರ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಲಾಯಿತು. ತನ್ನನ್ನು ಈ ಮದುವೆಗೆ ಆಹ್ವಾನಿಸಿಲ್ಲ ಎಂದು ಪುಟ್ಟ ಬಾಲಕಿಯೊಬ್ಬಳು ಕೋಪ ಮಾಡಿಕೊಂಡಿದ್ದಾಳೆ. ಆಕೆಗೆ ವಿಜಯ್ ದೇವರಕೊಂಡ (Vijay Devarakonda) ಸಮಾಧಾನ ಮಾಡಿದ್ದಾರೆ.
ಈಗಿನ ಕಾಲದ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದರಲ್ಲಿ ಮುಂದಿದ್ದಾರೆ. ಮೊಬೈಲ್ ಎತ್ತಿಕೊಂಡ ಬಾಲಕಿಯೊಬ್ಬಳು ವಿಡಿಯೋ ಮಾಡಿದ್ದಾರೆ. ‘ನಾವು ಕೂಡ ಫ್ಯಾನ್ಸ್ ಅಲ್ಲವಾ? ನಮಗೆ ಯಾಕೆ ಸ್ವೀಟ್ಸ್ ಕೊಟ್ಟಿಲ್ಲ’ ಎಂದು ಕೋಪದಲ್ಲಿ ಮಾತನಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಿಜಯ್ ದೇವರಕೊಂಡ ಅವರ ಗಮನ ಸೆಳೆದಿದೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ವಿಜಯ್ ದೇವರಕೊಂಡ ಅವರು, ‘ಕಂದಾ.. ಊಟಕ್ಕೆ ನಿನ್ನನ್ನು ಮನೆಗೆ ಕರೆಯುತ್ತೇನೆ. ನಿನ್ನ ಇಷ್ಟದ ಊಟ ಮತ್ತು ಸಿಹಿ ತಿಂಡಿ ಯಾವುದು ಅಂತ ಹೇಳು. ಮನೆಯಲ್ಲೇ ಆ ಅಡುಗೆ ಮಾಡಿಸಿ ಖುಷಿಯಿಂದ ತಿನ್ನೋಣ’ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹಲವು ವರ್ಷಗಳ ಕಾಲ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಡೇಟಿಂಗ್ ಮಾಡುತ್ತಿದ್ದರು. ಆದರೆ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಮಾತ್ರ ಅವರು ಆ ವಿಷಯವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು. ಫೆಬ್ರವರಿ 26ರಂದು ಉದಯಪುರದ ಖಾಸಗಿ ಹೋಟೆಲ್ನಲ್ಲಿ ಅವರಿಬ್ಬರು ಮದುವೆ ಮಾಡಿಕೊಂಡರು. ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.
ಇದನ್ನೂ ಓದಿ: ರಶ್ಮಿಕಾ, ವಿಜಯ್ ಆರತಕ್ಷತೆಯಲ್ಲಿ ಡಿಕೆಶಿ, ರಾಮ್ ಚರಣ್, ಅಲ್ಲು ಅರ್ಜುನ್: ಫೋಟೋ ಗ್ಯಾಲರಿ ನೋಡಿ..
ಮದುವೆ ಬಳಿಕ ಅಭಿಮಾನಿಗಳನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮರೆಯಲಿಲ್ಲ. ದೇಶಾದ್ಯಂತ ಹಲವು ನಗರಗಳಲ್ಲಿ ಅನ್ನದಾನ ಮಾಡಿದರು. ಮದುವೆಯ ಸಿಹಿಯನ್ನು ವಿವಿಧ ನಗರಗಳಲ್ಲಿ ವಿತರಣೆ ಮಾಡಿದರು. ಹೈದರಾಬಾದ್ನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್, ಚಿರಂಜೀವಿ, ಡಿಕೆ ಶಿವಕುಮಾರ್, ರಾಮ್ ಚರಣ್, ಕರಣ್ ಜೋಹರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.