ಚೆನ್ನೈ, ಮೇ 12: ಅಂಚೆ ಮತಪತ್ರಗಳ ಎಣಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮದ್ರಾಸ್ ಹೈಕೋರ್ಟ್ ತಿರುಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಶ್ರೀನಿವಾಸ ಸೇತುಪತಿ ಅವರನ್ನು ವಿಧಾನಸಭೆಯ ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದೆ. ಈ ಆದೇಶವು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಹತ್ವ ಪಡೆದಿದೆ. ಪೆರಿಯಾ ಕೃಪನ್ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಶ್ರೀನಿವಾಸ ಸೇತುಪತಿ ವಿರುದ್ಧ ಅಂಚೆ ಮತಪತ್ರಗಳಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದ್ದರು. ತಿರುಪತ್ತೂರು ವಿಧಾನಸಭಾ ಕ್ಷೇತ್ರ ಸಂಖ್ಯೆ 185ರ ಮತಗಳನ್ನು ಬೆಲ್ಲೂರು ಜಿಲ್ಲೆಯ ತಿರುಪತ್ತೂರು ಕ್ಷೇತ್ರ ಸಂಖ್ಯೆ 50ಕ್ಕೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂಬುದು ಅರ್ಜಿಯಲ್ಲಿದ್ದ ಪ್ರಮುಖ ಆಪಾದನೆಯಾಗಿತ್ತು.ಚುನಾವಣಾ ಆಯೋಗವು ಆರಂಭದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಮದ್ರಾಸ್ ಹೈಕೋರ್ಟ್ ಪೆರಿಯಾ ಕೃಪನ್ ಅವರ ದೂರನ್ನು ಬೆಂಬಲಿಸಲು ಸಾಕಷ್ಟು ಪುರಾವೆಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಶ್ರೀನಿವಾಸ ಸೇತುಪತಿ ಅವರು ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಎಲ್ಲಾ ಅಂಚೆ ಮತಪತ್ರಗಳನ್ನು ಸುರಕ್ಷಿತವಾಗಿಡಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಲು ಸಹ ನ್ಯಾಯಾಲಯ ಸೂಚಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.