ವಿಜಯಪುರ, ಜೂನ್ 25: ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಕೆಬಿಜೆಎನ್ಎಲ್ ಹೊಲಗಾಲುವೆ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲೇ ಮದ್ಯಪಾನ ಪಾರ್ಟಿ (Alcohol party) ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಲಮೇಲ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಅವರು ಮದ್ಯಪಾನ ಮಾಡುತ್ತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕರ್ತವ್ಯ ವೇಳೆಯೇ ಪಾರ್ಟಿ
ಹೊಲಗಾಲುವೆ ವಿಭಾಗದ ಮ್ಯಾನೇಜರ್ ಶಶಿಧರ್ ಚೌಹಾನ್, ದ್ವಿತೀಯ ದರ್ಜೆ ಸಹಾಯಕ ಮುರಳಿದರ್ ಕುಲಕರ್ಣಿ ಹಾಗೂ ಸಿಪಾಯಿ ಶಂಕರಯ್ಯ ಕರ್ತವ್ಯದ ವೇಳೆಯಲ್ಲೇ ಮದ್ಯಪಾನ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಆರೋಪದ ಪ್ರಕಾರ, ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಮಧ್ಯಾಹ್ನ ಕಚೇರಿಗೆ ಗೈರಾಗುತ್ತಿದ್ದು, ಬಾರ್ ಹಾಗೂ ಡಾಬಾಗಳಲ್ಲಿ ಸಮಯ ಕಳೆಯುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿ ಶೀಟರ್ ಎಣ್ಣೆ ಪಾರ್ಟಿ!
ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯದ ವೇಳೆಯಲ್ಲೇ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖೆ ಸಮಗ್ರ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಹಾಸ್ಟೆಲ್ನಲ್ಲೇ ವಿದ್ಯಾರ್ಥಿನಿಯರ ಎಣ್ಣೆ ಪಾರ್ಟಿ
ಕಲಬುರಗಿ ಜಿಲ್ಲೆಯ ಆಳದ ತಾಲೂಕಿನ ಕಡಗಂಚಿ ಗ್ರಾಮದ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ತಡರಾತ್ರಿವರೆಗೂ ವಿದ್ಯಾರ್ಥಿನಿಯರು ಬಿಂದಾಸ್ ಆಗಿ ಹುಡುಗರ ಜೊತೆ ಎಣ್ಣೆ ಪಾರ್ಟಿ ಮಾಡಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು.
ಹಣಕ್ಕೆ ಡಿಮ್ಯಾಂಡ್: ವಾರ್ಡನ್ ಆಡಿಯೋ ವೈರಲ್
ಕಡಗಂಚಿ ಗ್ರಾಮದ ಬಿಸಿಎಂ ಹಾಸ್ಟೆಲ್ನಲ್ಲಿ ಹೇಳುವವರು, ಕೇಳುವವರಿಲ್ಲದಂತಾಗಿತ್ತು. ಈ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರು ಬಿಂದಾಸ್ ಆಗಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆದರೆ ದುರಂತ ಅಂದರೆ ಹಾಸ್ಟೆಲ್ಗೆ ಎಣ್ಣೆ ತಂದು ಹುಡುಗರ ಜೊತೆ ಬಿಂದಾಸ್ ಆಗಿ ಪಾರ್ಟಿ ಮಾಡುತ್ತಿರುವುದು ವಾರ್ಡನ್ ಆಗಲಿ, ತಾಲೂಕು ಅಧಿಕಾರಿಗಳಾಗಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಎಣ್ಣೆ ಪಾರ್ಟಿಯ ವಿಚಾರ, ಹುಡುಗರು ಬಂದು ಹೋಗುವ ವಿಚಾರವನ್ನ ಮುಚ್ಚಿ ಹಾಕುವುದಕ್ಕೆ ವಾರ್ಡನ್ ಹುಡುಗಿಯರ ಬಳಿ ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಆಡಿಯೋ ಕೂಡ ವೈರಲ್ ಆಗಿತ್ತು. ಇದನ್ನು ನೋಡಿದರೆ ಈ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಬಹಳ ಸ್ಪಷ್ಟವಾಗಿ ಕಂಡುಬಂದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.