15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಅಟೋ ದರ 1,200 ರೂ.!
ಬೆಂಗಳೂರು, ಮೇ 06: ನಗರದಲ್ಲಿ ಮಳೆ ಬಂತೆಂದರೆ ಸಾಕು ರಸ್ತೆ ತುಂಬ ನೀರು ನಿಂತು ಹಳ್ಳಗಳಂತೆ ಕಾಣತೊಡಗುತ್ತವೆ. ವಾಹನ ಸವಾರರು ಸಂಚರಿಸೋದೇ ಕಷ್ಟ ಎಂಬ ಸ್ಥಿತಿ ನಿರ್ಮಾಣ ಆಗೋದು ಮಾಮೂಲು ಎಂಬಂತಾಗಿದೆ. ಈ ನಡುವೆ ಬಸ್, ಮೆಟೋ ರೈಲುಗಳಲ್ಲಿ ತೆರಳಬೇಕಿರುವ ಕಾರಣಕ್ಕೋ ಅಥವಾ ಮನೆಗೆ ಹೋಗಲೆಂದೋ ಆಟೋ ಅಥವಾ ಕ್ಯಾಬ್ಗಳನ್ನು ಬುಕ್ ಮಾಡಿದರೆ ಅವು ಸಿಗೋದು ಕೂಡ ಬಹಳ ಕಷ್ಟಸಾಧ್ಯ. ಅಪ್ಪಿತಪ್ಪಿ ಸಿಕ್ಕಿದರೂ ಅವುಗಳ ದರ ಮಾಮೂಲಿಗಿಂತ ದುಪ್ಪಟ್ಟು ಅನ್ನೋದು ಬೆಂಗಳೂರಿಗರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಇಂತಹುದ್ದೇ ವಿಚಾರವೊಂದನ್ನು ಯುವತಿಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯುವತಿ ಹೇಳಿದ್ದೇನು?
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಯುವತಿಯೊಬ್ಬರು ಮಳೆ ಸಂದರ್ಭ ತಮ್ಮ ಸ್ನೇಹಿತೆ 15 ಕಿಮೀ ಪ್ರಯಾಣಕ್ಕೆ 1,200 ರೂಪಾಯಿ ಹಣ ನೀಡಿ ಆಟೋದಲ್ಲಿ ತೆರಳಿರೋದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಕೆಲ ಆಟೋ ಮತ್ತು ಕ್ಯಾಬ್ಗಳ ಚಾಲಕರಿಂದಾಗುತ್ತಿರುವ ಸುಲಿಗೆಯ ಬಗ್ಗೆ ತೀವ್ರವಾಗಿ ಟೀಕಿಸಿರುವ ಆಕೆ, ಈ ದರಗಳು ಸಾಮಾನ್ಯ ಜನರಿಗೆ ಬಹಳ ಭಾರವಾಗುತ್ತವೆ ಎಂದು ದೂರಿದ್ದಾರೆ. ಸಾನ್ಯಾ ಸಿಂಗ್ ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಆಗಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಚಾಲಕನ ರೌಡಿಸಂ; ಪೊಲೀಸ್ ಮುಂದೆಯೇ ಆಟೋ ಗ್ಲಾಸ್ ಒಡೆದು ಪುಂಡಾಟ!
ಇನ್ನು ಯುವತಿಯ ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು 1,200 ದರ ಅತಿಯಾಗಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬೆಂಗಳೂರಿನಲ್ಲಿ ಇಂತಹ ದರಗಳು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು 1,200 ರೂಪಾಯಿಗಳಿಗೆ ಏರ್‌ಪೋರ್ಟ್‌ಗೆ ಕ್ಯಾಬ್ ಬುಕ್ ಮಾಡಬಹುದು ಎಂದಿದ್ದಾರೆ. ಇನ್ನು ಕೆಲವರು ಈ ದರ ಒಬ್ಬರ ದಿನದ ಸಂಬಳದಷ್ಟಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮಳೆ ಸಂದರ್ಭ ಆಟೋ ಮತ್ತು ಕ್ಯಾಬ್ ದರಗಳ ದಿಢೀರ್ ಅತಿ ಏರಿಕೆ ಬಗ್ಗೆ ಆಕ್ರೋಶ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
