ನವದೆಹಲಿ, ಆಗಸ್ಟ್ 7: ಪ್ರಸಿದ್ಧ ವಾಹನ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ವಿಮಾನ ಹಾಗೂ ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಹೊಸ ಸಂಸ್ಥೆಯೊಂದನ್ನು ಸ್ಥಾಪಿಸಿದೆ. ಡಿಫೆನ್ಸ್ ಸೆಕ್ಟರ್ಗೆ ಪೂರೈಕೆ ಮಾಡುವ ಉದ್ದೇಶದಿಂದ ‘ನೋವಾವಾಯು ಏರೋಸ್ಪೇಸ್ ಲಿಮಿಟೆಡ್’ (Novavayu Aerospace Limited) ಎಂಬ ನೂತನ ಅಂಗಸಂಸ್ಥೆಯನ್ನು ಪ್ರಾರಂಭಿಸಿದೆ. ಮಹೀಂದ್ರ ಗ್ರೂಪ್ಗೆ ಸೇರಿದ ಮಹೀಂದ್ರ ಅಡ್ವಾನ್ಸ್ಡ್ ಸಿಸ್ಟಮ್ಸ್ ಮಾಲಕತ್ವದ ಮಹೀಂದ್ರ ಡಿಫೆನ್ಸ್ ಸಿಸ್ಟಮ್ಸ್ನ (Mahindra Defence Systems) ಅಂಗಸಂಸ್ಥೆಯಾಗಿ ಈ ಹೊಸ ಕಂಪನಿಯನ್ನು 2026ರ ಜುಲೈ 29ರಂದು ನೊಂದಾಯಿಸಲಾಗಿದ್ದು, ಮುಂಬೈನಲ್ಲಿ ಮುಖ್ಯ ಕಚೇರಿ ಇದೆ.
ರಕ್ಷಣಾ ಕ್ಷೇತ್ರಕ್ಕಾಗಿ ವಿಮಾನಗಳ ತಯಾರಿಕೆ (Aircraft Manufacturing), ಏರೋಸ್ಪೇಸ್ ಉತ್ಪನ್ನಗಳು ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನೋವಾವಾಯು ಕಂಪನಿಯನ್ನು ₹1 ಕೋಟಿ ಅಧಿಕೃತ ಶೇರು ಬಂಡವಾಳದೊಂದಿಗೆ ಪ್ರಾರಂಭಿಸಲಾಗಿದೆ.
ಬೆಂಗಳೂರಿನ ಉತ್ಪಾದನಾ ಘಟಕದ ಬೆಂಬಲ
ಆನಂದ್ ಮಹೀಂದ್ರ ಒಡೆತನದ ಮಹೀಂದ್ರಾ ಗ್ರೂಪ್ ಈಗಾಗಲೇ ಬೆಂಗಳೂರಿನ ಬಳಿ ಬೃಹತ್ತಾದ ‘ಮಹೀಂದ್ರಾ ಏರೋಸ್ಟ್ರಕ್ಚರ್ಸ್’ (Mahindra Aerostructures) ಘಟಕವನ್ನು ಹೊಂದಿದ್ದು, ಏರ್‌ಬಸ್ (Airbus) ಹೆಲಿಕಾಪ್ಟರ್‌ಗಳ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಹೊಸ ‘ನೋವಾವಾಯು’ ಸಂಸ್ಥೆಯು ಈ ಅನುಭವವನ್ನು ಬಳಸಿಕೊಂಡು ಸಂಪೂರ್ಣ ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ, ನೋವಾವಾಯು ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ, ಯಾರಿಗೆ ಪೂರೈಕೆ ಮಾಡುತ್ತದೆ ಎಂಬುದು ಇನ್ನೂ ನಿರ್ಧಾರವಾದಂತಿಲ್ಲ. ನೊಂದಣಿ ಪ್ರಕ್ರಿಯೆ ಈಗಷ್ಟೇ ಮುಗಿದಿರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬಹುದು.
ಇದನ್ನೂ ಓದಿ: 2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ
ಬ್ರೆಜಿಲ್‌ನ ಎಂಬ್ರೇರ್ ಜೊತೆ ಮಹೀಂದ್ರ ಒಪ್ಪಂದ
ಕಳೆದ ವರ್ಷ (2025) ಅಕ್ಟೋಬರ್ ತಿಂಗಳಲ್ಲಿ ಬ್ರೆಜಿಲ್‌ನ ಎಂಬ್ರೇರ್ (Embraer) ಸಂಸ್ಥೆಯೊಂದಿಗೆ ‘C-390 ಮಿಲಿಟರಿ ಸಾರಿಗೆ ವಿಮಾನ’ ತಯಾರಿಕೆಗೆ ಸಂಬಂಧಿಸಿದಂತೆ ಮಹೀಂದ್ರಾ ಒಪ್ಪಂದ ಮಾಡಿಕೊಂಡಿತ್ತು. ಇದೇ ಉದ್ದೇಶಕ್ಕೆ ನೋವಾವಾಯು ಏರೋಸ್ಪೇಸ್ ಅನ್ನು ಆರಂಭಿಸಲಾಗಿದೆಯಾ ಎನ್ನುವ ಅನುಮಾನ ಇದೆಯಾದರೂ ಅದು ಖಚಿತವಿಲ್ಲದ ಸುದ್ದಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
