ಬೆಂಗಳೂರು, (ಜುಲೈ 18): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ (HD Deve Gowda’s Wife Chennamma) ಇಂದು (ಜುಲೈ 18) ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಇಂದು ರಾತ್ರಿ ಪದ್ಮನಾಭನಗರದ ನಿವಾಸದಲಿ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜುಲೈ 19) ಬೆಳಿಗ್ಗೆ ಸಾರ್ವಜನಿಕರಿಗೆ ಪದ್ಭನಾಭನಗರದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಬಳಿಕ ಮಧ್ಯಾಹ್ನದ ನಂತರ ಸ್ವಗ್ರಾಮ ಹಾಸನದ ಹರದನಳ್ಳಿಗೆ ಮೃತ ದೇಹ ಕೊಂಡೊಯ್ದು ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ತದನಂತರ ಸೋಮವಾರ ಹರದನಹಳ್ಳಿ ಬಳಿಯ ಮಾವಿನಕೆರೆಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
