
ನವದೆಹಲಿ, ಏಪ್ರಿಲ್ 07: ಶಬರಿಮಲೆ(Sabarimala) ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ 2018ರ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 7 ರಿಂದ ಆರಂಭಿಸಿದೆ. 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ಸಂವೇದನಾಶೀಲ ಪ್ರಕರಣವನ್ನು ಪರಿಶೀಲಿಸುತ್ತಿದೆ. 10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಹಿಂದಿನ ತೀರ್ಪನ್ನು ಭಕ್ತರು ಮತ್ತು ಕೇರಳ ಸರ್ಕಾರ ವಿರೋಧಿಸಿದ್ದು, ಈ ಬಾರಿಯ ವಿಚಾರಣೆಯಲ್ಲಿ ಧಾರ್ಮಿಕ ಆಚರಣೆ ಮತ್ತು ಸಂವಿಧಾನಿಕ ಹಕ್ಕುಗಳ ಸಮತೋಲನದ ಕುರಿತು ಚರ್ಚೆ ನಡೆಯಲಿದೆ.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮುಟ್ಟಾದ ಹೆಣ್ಣುಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಾರಂಭಿಸಿದೆ. 2018 ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಪರಿಶೀಲನಾ ಅರ್ಜಿಗಳನ್ನು ಪರಿಗಣಿಸಲು ನ್ಯಾಯಾಲಯವು ಔಪಚಾರಿಕವಾಗಿ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವನ್ನು ರಚಿಸಿತು. ಏಪ್ರಿಲ್ 7-9 ವರೆಗೆ ಅರ್ಜಿ ಪರ, 14-16 ವರೆಗೆ ವಿರೋಧಿಸಿ ವಾದ, ಮತ್ತು ಏಪ್ರಿಲ್ 22ರೊಳಗೆ ಅಂತಿಮ ಸಲ್ಲಿಕೆ ಮುಗಿಸಲು ನಿರ್ಧರಿಸಲಾಗಿದೆ.
2018 ಸೆಪ್ಟೆಂಬರ್ ನಲ್ಲಿ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂನ ಐದು ನ್ಯಾಯಾಧೀಶರ ಪೀಠವು ತೀರ್ಪು ನೀಡಿತ್ತು. ಆದರೆ ಇವರಲ್ಲಿ ಇಂದೂ ಮಲ್ಹೋತ್ರಾ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಕೆಲ ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ತೀರ್ಪು ಮರುಪರಿಶೀಲಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ.
ಮತ್ತಷ್ಟು ಓದಿ: Video: ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಸೋಂಕಿನ ಭೀತಿ, ಮಾರ್ಗಸೂಚಿ ಬಿಡುಗಡೆ
ಇದರೊಂದಿಗೆ ದರ್ಗಾ ಅಥವಾ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಅಲ್ಲದವರನ್ನ ವಿವಾಹವಾಗಿದ್ದರೆ ಅಗ್ನಿ ದೇವಾಲಯಗಳಿಗೆ ಪಾರ್ಸಿ ಮಹಿಳೆಯರ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದವರಲ್ಲಿ ಬಹಿಷ್ಕಾರ ಮತ್ತು ಸ್ತ್ರೀ ಜನನಾಂಗ ಛೇದನದ ಪದ್ಧತಿಗಳ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ.
ಇನ್ನೂ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಬೆಂಬಲ ನೀಡಿದೆ. ಆದರೆ ನಿರ್ಬಂಧವನ್ನ ಕೇಂದ್ರ ಸರ್ಕಾರ ಬೆಂಬಲಿಸಿದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಬೆಂಬಲಿಸುವ ಪಕ್ಷಗಳು ಏಪ್ರಿಲ್ 7 ರಿಂದ ಏಪ್ರಿಲ್ 9 ರ ವರೆಗೆ ಹಾಗೂ ವಿರೋಧಿಸುವ ಪಕ್ಷಗಳು ಏಪ್ರಿಲ್ 14 ರಿಂದ ಏಪ್ರಿಲ್ 16 ರ ವರೆಗೆ ವಾದ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಏಪ್ರಿಲ್ 21 ರಂದು ಮರುಪ್ರಶ್ನೆ ಸಲ್ಲಿಕೆಗಳು ನಡೆಯಲಿದ್ದು, ಏಪ್ರಿಲ್ 22 ರಂದು ವಿಚಾರಣೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಒಂಬತ್ತು ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದರೇಶ್, ಅಹ್ಸನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಎ.ಜಿ. ಮಸಿಹ್, ಪ್ರಸನ್ನ ಬಿ. ವರಾಳೆ, ಆರ್. ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಕೂಡ ಇದ್ದಾರೆ. ಶಬರಿಮಲೆ ಪ್ರಕರಣದ ಜೊತೆಗೆ, ಸುಪ್ರೀಂ ಕೋರ್ಟ್ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ವಿಶಾಲವಾದ ಸಾಂವಿಧಾನಿಕ ಪ್ರಶ್ನೆಗಳನ್ನು ಸಹ ಪರಿಗಣಿಸುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ವಿಚಾರಣೆಗೆ ವಿವರವಾದ ವೇಳಾಪಟ್ಟಿಯನ್ನು ನಿಗದಿಪಡಿಸಿತ್ತು. ಇದೀಗ ಸಿಪಿಎಂ ರಾಜ್ಯ ಘಟಕವು ಶಬರಿಮಲೆ ಸಂಪ್ರದಾಯದ ಪರವಾಗಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ನಿಲುವು ಬದಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ