ಭಾರತೀಯ ಕ್ರಿಕೆಟ್ನ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಆರ್ಭಟಕ್ಕೆ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಸ್ಥಾನಕ್ಕೆ ಕುತ್ತು ಬಂದಿದೆಯೇ? ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಸಜ್ಜಾಗಿರುವ ಈ ‘ವಂಡರ್ ಕಿಡ್’ ಎಂಟ್ರಿಯಿಂದ ಅಭಿಷೇಕ್ ಶರ್ಮಾ ಹೊರಬೀಳುತ್ತಾರಾ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಮುಖ್ಯ ಕಾರಣ ಇತ್ತೀಚೆಗೆ ವೈಭವ್ ಸೂರ್ಯವಂಶಿ ಅವರ ಬಾಲ್ಯದ ಕೋಚ್ ಮನೀಶ್ ಓಜಾ ನೀಡಿದ ಹೇಳಿಕೆಗಳು.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ಈ ಯುವ ಆಟಗಾರ, ಶೀಘ್ರದಲ್ಲೇ ಟೀಮ್ ಇಂಡಿಯಾದಲ್ಲಿ ಸ್ಫೋಟಕ ಓಪನರ್ ಆಗಿ ಸ್ಥಾನ ಪಡೆಯಲಿದ್ದಾರೆ. ಅದು ಸಹ ಅಭಿಷೇಕ್ ಶರ್ಮಾ ಅವರನ್ನು ಸ್ಥಾನವನ್ನು ಆಕ್ರಮಿಸಿಕೊಳ್ಳುವ ಮೂಲಕ..!
ಈ ಬಗ್ಗೆ ಮಾತನಾಡಿದ ವೈಭವ್ ಅವರ ಬಾಲ್ಯದ ಕೋಚ್ ಮನೀಶ್ ಓಜಾ, ದೊಡ್ಡ ಆಟಗಾರರು ತಮ್ಮ ಸ್ಥಾನವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಅತ್ತ ಅಭಿಷೇಕ್ ಶರ್ಮಾ ‘ಅಸ್ಥಿರ ಪ್ರದರ್ಶನ’ ನೀಡುತ್ತಿದ್ದಾರೆ. ಹೀಗಾಗಿ ಮುಂಬರುವ ಐರ್ಲೆಂಡ್ ಮತ್ತು ಝಿಂಬಾಬ್ವೆ ಸರಣಿಗಳಲ್ಲಿ ವೈಭವ್ ಅವರನ್ನು ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂಬುದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಭಿಷೇಕ್ ಶರ್ಮಾಗೆ ಸಂಕಷ್ಟ?
ಸನ್ ರೈಸರ್ಸ್ ಹೈದರಾಬಾದ್ ಪರ ಅದ್ಭುತ ದಾಖಲೆಗಳನ್ನು ಬರೆಯುತ್ತಿರುವ ಅಭಿಷೇಕ್ ಶರ್ಮಾ, ಇತ್ತೀಚೆಗಷ್ಟೇ ಅತಿ ವೇಗವಾಗಿ 2,000 ಐಪಿಎಲ್ ರನ್ ಪೂರೈಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್ ಮತ್ತು ಅವರ ವಯಸ್ಸು (ಕೇವಲ 15 ವರ್ಷ) ಆಯ್ಕೆಗಾರರ ಗಮನ ಸೆಳೆದಿದೆ.
ಒಂದು ವೇಳೆ ಜೂನ್‌ನಲ್ಲಿ ನಡೆಯಲಿರುವ ಐರ್ಲೆಂಡ್ ಸರಣಿಗೆ ವೈಭವ್ ಆಯ್ಕೆಯಾದರೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಭಾರತದ ಅತ್ಯಂತ ಕಿರಿಯ ಪದಾರ್ಪಣೆ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಅತ್ತ ಅಭಿಷೇಕ್ ಶರ್ಮಾ ಉತ್ತಮವಾಗಿ ಬ್ಯಾಟ್ ಬೀಸಿದರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂಬುದೇ ಸತ್ಯ. ಇದೇ ವೇಳೆ ವೈಭವ್ ಸೂರ್ಯವಂಶಿ ಸ್ಥಿರ ಪ್ರದರ್ಶನದೊಂದಿಗೆ ಅಬ್ಬರಿಸುತ್ತಿದ್ದಾರೆ. ಹೀಗಾಗಿ ಅಭಿಷೇಕ್ ಶರ್ಮಾ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ.
ಕೋಚ್ ಉವಾಚ:
ವೈಭವ್ ಸೂರ್ಯವಂಶಿ ಅವರ ಬಾಲ್ಯದ ತರಬೇತುದಾರ ಮನೀಶ್ ಓಜಾ ಅವರು ಅಭಿಷೇಕ್ ಶರ್ಮಾ ಅವರ ಸ್ಥಾನದ ಬಗ್ಗೆ ಮಾತ್ರವಲ್ಲದೆ, ವೈಭವ್ ಅವರ ಕ್ರಿಕೆಟ್ ಭವಿಷ್ಯ ಮತ್ತು ಅವರಲ್ಲಿರುವ ವಿಶೇಷ ಗುಣಗಳ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ:
ಅಭಿಷೇಕ್ ಶರ್ಮಾ ಅವರ ಇತ್ತೀಚಿನ ಪ್ರದರ್ಶನಗಳಲ್ಲಿ ಸ್ಥಿರತೆ ಇಲ್ಲ. ಟೀಮ್ ಇಂಡಿಯಾ ಆರಂಭಿಕರಿಗಾಗಿ ಹುಡುಕಾಟ ನಡೆಸುತ್ತಿರುವಾಗ, ವೈಭವ್ ಅವರಂತಹ ಆಕ್ರಮಣಕಾರಿ ಆಟಗಾರನಿಗೆ ಇದು ಒಂದು ಸುವರ್ಣ ಅವಕಾಶ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏಕೆಂದರೆ ವೈಭವ್ ಒಬ್ಬ ‘ಗಾಡ್ ಗಿಫ್ಟೆಡ್’ ಆಟಗಾರ. ಅವರು ಎಷ್ಟೇ ಕ್ಲಿಷ್ಟಕರವಾದ ತಾಂತ್ರಿಕ ವಿಷಯವನ್ನಾದರೂ ಒಮ್ಮೆ ಹೇಳಿದರೆ ಸಾಕು, ತಕ್ಷಣವೇ ಅದನ್ನು ಕಲಿಯುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಈಗ ಅವರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅಥವಾ ಎಂ.ಎಸ್. ಧೋನಿಯಂತೆ ವೈಭವ್ ಕೂಡ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಕೋಚ್ ಮನೀಶ್ ಓಜಾ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಗಾಗಿ ಬ್ಯಾಟ್ ಹಿಡಿಯಲಿದ್ದಾರೆ ನೊವಾಕ್ ಜೋಕೊವಿಚ್!
ಮುಂಬರುವ ಝಿಂಬಾಬ್ವೆ ಅಥವಾ ಐರ್ಲೆಂಡ್ ಪ್ರವಾಸಗಳಂತಹ ಸರಣಿಗಳಲ್ಲಿ ಬೌನ್ಸಿ ಪಿಚ್‌ಗಳು ವೈಭವ್ ಅವರಿಗೆ ಹೆಚ್ಚು ಅನುಕೂಲಕರವಾಗಲಿವೆ. ಏಕೆಂದರೆ ಅವರು ಹಾರಿಜಾಂಟಲ್-ಬ್ಯಾಟ್ ಶಾಟ್‌ಗಳನ್ನು (ಪುಲ್ ಮತ್ತು ಕಟ್ ಶಾಟ್) ಬಹಳ ಸಮರ್ಥವಾಗಿ ಆಡುತ್ತಾರೆ ಎಂದು ಓಜಾ ವಿವರಿಸಿದ್ದಾರೆ. ಹೀಗಾಗಿ ವೈಭವ್ ಸೂರ್ಯವಂಶಿ ಅವರನ್ನು ಈ ಸರಣಿಗಳಿಗೆ ಆಯ್ಕೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
