ಟಿ20 ಕ್ರಿಕೆಟ್‌ನ ಸಿಡಿಲಬ್ಬರದ ಸಿಡಿಲಮರಿ ವೈಭವ್ ಸೂರ್ಯವಂಶಿ ಜಗತ್ತಿನ ಯಾವುದಾದರೂ ಬೌಲರ್‌ಗೆ ಹೆದರುತ್ತಾರಾ? ಇಂತಹದ್ದೊಂದು ಆಸಕ್ತಿದಾಯಕ ಪ್ರಶ್ನೆಯನ್ನು ಈ ಯುವ ದಾಂಡಿಗನ ಮುಂದಿಡಲಾಗಿತ್ತು. ಇದಕ್ಕೆ ವೈಭವ್ ನೀಡಿದ ಕೇವಲ ನಾಲ್ಕು ಪದಗಳ ಉತ್ತರ ಇಡೀ ಕ್ರಿಕೆಟ್ ಲೋಕವೇ ಬೆರಗಾಗುವಂತೆ ಮಾಡಿದೆ.
ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ಆ ಲಘು ಧಾಟಿಯ ಸಂಭಾಷಣೆಯ ವಿಡಿಯೋದಲ್ಲಿ, ನಿರೂಪಕರು ವೈಭವ್‌ಗೆ ಒಂದು ಆಸಕ್ತಿದಾಯಕ ಪ್ರಶ್ನೆ ಕೇಳುತ್ತಾರೆ, “ನೀವು ಎದುರಿಸಲು ಇಷ್ಟಪಡದ ಅಥವಾ ನಿಮಗೆ ಭಯ ಹುಟ್ಟಿಸುವ ಒಬ್ಬ ಬೌಲರ್ ಹೆಸರನ್ನು ಹೇಳಿ?”
ಇದಕ್ಕೆ ಕಿಂಚಿತ್ತೂ ತಡಕಾಡದೆ, ಮುಖದಲ್ಲಿ ಸಣ್ಣ ನಗೆಯೊಂದಿಗೆ ವೈಭವ್ ನೀಡಿದ ನೇರ ಉತ್ತರ: “ಕೋಯಿ ನಹೀ ಹೈ ಅಭಿ” (No one till now – ಇದುವರೆಗೆ ಯಾರೂ ಇಲ್ಲ!). ಯುವ ದಾಂಡಿಗನ ಈ ಛಲದ ಮಾತು, ಈ ಹದಿಹರೆಯದ ಆಟಗಾರನಿಗೆ ಜಾಗತಿಕ ವೇದಿಕೆಯಲ್ಲಿರುವ ಬೌಲರ್‌ಗಳ ಬಗ್ಗೆ ಯಾವುದೇ ಭಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಮೈದಾನದಲ್ಲೂ ಅಬ್ಬರ, ಮಾತಿನಲ್ಲೂ ಗತ್ತು!
ವೈಭವ್ ಅವರ ಈ ಮಾತು ಕೇವಲ ಅಹಂಕಾರವಲ್ಲ, ಬದಲಿಗೆ ಅವರು ಮೈದಾನದಲ್ಲಿ ತೋರಿಸುತ್ತಿರುವ ಅಪ್ರತಿಮ ಫಾರ್ಮ್‌ನ ಪ್ರತಿಬಿಂಬವಾಗಿದೆ. ಜಸ್ಪ್ರೀತ್ ಬುಮ್ರಾ, ಜೋಶ್ ಹೇಝಲ್ವುಡ್, ಮತ್ತು ಪ್ಯಾಟ್ ಕಮಿನ್ಸ್ ಅವರಂತಹ ವಿಶ್ವದ ನಂ.1 ವೇಗಿಗಳ ಎಸೆತಗಳಲ್ಲೇ ಅತ್ಯಂತ ಸುಲಭವಾಗಿ ಬೌಂಡರಿ ಬಾರಿಸುವ ಮೂಲಕ ವೈಭವ್ ಈಗಾಗಲೇ ತಮ್ಮ ದಕ್ಷತೆಯನ್ನು ಸಾಬೀತುಪಡಿಸಿದ್ದಾರೆ.
ಯುವ ದಾಂಡಿಗನ ದಾಖಲೆಗಳ ಸರಮಾಲೆ:
“ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬೆನ್ನಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿರುವ ವೈಭವ್ ಸೂರ್ಯವಂಶಿ, ಇದೀಗ ಅದೇ ಅಬ್ಬರವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮುಂದುವರಿಸಿದ್ದಾರೆ. ಇದಕ್ಕೆ ಸಾಕ್ಷಿ ಇತ್ತೀಚಿನ ದಾಖಲೆಗಳು.
- ಐಪಿಎಲ್ ಕಿಂಗ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ಟೂರ್ನಿಯಲ್ಲಿ ಬರೋಬ್ಬರಿ 776 ರನ್ ಸಿಡಿಸುವ ಮೂಲಕ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ಕೊಡುವ ‘ಆರೆಂಜ್ ಕ್ಯಾಪ್’ ಮತ್ತು ಟೂರ್ನಿಯ ‘ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್’ (MVP) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
- ಅತೀ ಕಿರಿಯ ಆಟಗಾರ: ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
- ವಿಶ್ವ ದಾಖಲೆಯ ಅರ್ಧಶತಕ: ಜುಲೈ 23, 2026 ರಂದು ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚುವ ಮೂಲಕ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: IPL 2027: ಐಪಿಎಲ್ ಹರಾಜಿಗೂ ಮುನ್ನ CSK ‘ಮಾಸ್ಟರ್ ಪ್ಲ್ಯಾನ್’
ಒಟ್ಟಾರೆಯಾಗಿ ಹೇಳುವುದಾದರೆ, ವೈಭವ್ ಸೂರ್ಯವಂಶಿ ಕೇವಲ ರನ್ ಗಳಿಸುತ್ತಿಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್‌ಸ್ಟಾರ್ ತಾನೇ ಎಂಬುದನ್ನು ಜಗತ್ತಿಗೆ ಸಾರುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಬೌಲರ್‌ಗಳನ್ನು ಬೆಂಡೆತ್ತುವ ಈ 15ರ ಹರೆಯದ ಸಿಡಿಲಮರಿ, ಮಾತಿನಲ್ಲೂ ಅಷ್ಟೇ ಖಡಕ್ ಆಗಿ ಉತ್ತರಿಸಿರುವುದು ಅಭಿಮಾನಿಗಳ ಮನ ಗೆದ್ದಿದೆ. ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಈ ಯುವ ಪ್ರತಿಭೆ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಯಾವ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Published On – 8:57 am, Thu, 30 July 26
