ಗೃಹ ಸಚಿವ ಪ್ರಿಯಾಂಕ್ ಖರ್ಗೆ
Image Credit source: PTI
ಕಲಬುರಗಿ, ಜುಲೈ 06: ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೊಂದು ಹೊಸ ಸಮರ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಆರ್ಎಸ್ಎಸ್ ನೋಂದಣಿ ಬಗ್ಗೆ ಮಾತಾಡುತ್ತಲೇ ಬಂದಿರುವ ಸಚಿವರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋದು ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಆರ್ಎಸ್ಎಸ್ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು. ಹುಡುಕುತ್ತಿದ್ದಾರೆ ಹುಡುಕಿಕೊಂಡು ಬರಲಿ. ಇಷ್ಟು ಕೇಳಿದ್ದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದು, ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾನಾ, ಬೆಳ್ಳಗಿದ್ದಾನಾ ಎಲ್ಲಾ ಕೆದಕುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಹಿಂದೆ ಕಲಬುರಗಿಯ ಚಿತ್ತಾಪುರ ಮತ್ತು ಯಾದಗಿರಿಯ ಕೆಂಭಾವಿಯಲ್ಲಿ RSS ಪಥಸಂಚಲ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು. ವಿಚಾರ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು ಎಂಬುದಿಲ್ಲಿ ಗಮನಾರ್ಹ ವಿಷಯವಾಗಿದೆ.
RSS ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಆರ್ಎಸ್ಎಸ್ನವರು ಧ್ವಜದ ಮೇಲೆ ದೇಣಿಗೆ ತೆಗೆದುಕೊಳ್ತಾರೆ. ದೇಣಿಗೆ ಪಡೆದುಕೊಳ್ಳೋಕೆ ಇವರ ಗುರು ಯಾರು?ಹಾಗಿದ್ರೆ ಇವರಗೆ ಲೆಕ್ಕ ಕೇಳಬಾರದಾ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ. ನಾಳೆ ನೀವೂ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಕಲೆಕ್ಟ್ ಮಾಡಿ. ಅವಾಗ ಐಟಿ,ಇಡಿಯವರು ಸುಮ್ನೆ ಕೂರುತ್ತಾರಾ? ಎಲ್ಲರೂ ಹೀಗೇ ಮಾಡಲಿ ಅವಾಗ ನೋಡೋಣ ಎಂದವರು ಕಿಡಿ ಕಾರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
