ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ 21ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪೊಮೊನಾದ ನೈಟ್ ರೈಡರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ vs ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 121 ರನ್ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡವು 69 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳು ಪೆವಿಲಿಯನ್ ಸೇರಿದ್ದರು.
ಇದಾಗ್ಯೂ ಶುಭಂ ರಂಜಾನೆ (40) ಹಾಗೂ ಡೊನವನ್ ಫೆರೇರಾ ಹೋರಾಟ ಮುಂದುವರೆಸಿದ್ದರು. ಪರಿಣಾಮ ಕೊನೆಯ ಓವರ್ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 15 ರನ್ಗಳು ಬೇಕಿತ್ತು.
ಈ ಹಂತದಲ್ಲಿ ಸಿಯಾಟಲ್ ಓರ್ಕಾಸ್ ತಂಡದ ನಾಯಕ ಮಾರ್ಕಸ್ ಸ್ಟೊಯಿನಿಸ್ ಚೆಂಡನ್ನು ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ದಸುನ್ ಶಾನಕ ಅವರ ಕೈಗಿತ್ತರು.
4 ಎಸೆತಗಳಲ್ಲಿ 4 ವಿಕೆಟ್:
ಕೊನೆಯ ಓವರ್ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ದಸುನ್ ಶಾನಕ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಸಿಯಾಟಲ್ ಓರ್ಕಾಸ್ ತಂಡಕ್ಕೆ 9 ರನ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಓವರ್ನ ವಿವರಗಳು ಈ ಕೆಳಗಿನಂತಿದೆ…
-
- ಮೊದಲ ಎಸೆತ (19.1): ಶುಭಂ ರಂಜಾನೆ ಪಾಯಿಂಟ್ ಮೇಲಿಂದ ಬೌಂಡರಿ ಬಾರಿಸಿದರು (ಗೆಲುವಿಗೆ 5 ಎಸೆತಗಳಲ್ಲಿ 11 ರನ್ ಬೇಕಿತ್ತು).
- ಎರಡನೇ ಎಸೆತ (19.2): ಒಂದು ರನ್ ಮೂಲಕ ಸಮೀಕರಣ 4 ಎಸೆತಗಳಲ್ಲಿ 10 ರನ್‌ಗಳಿಗೆ ಬಂದು ನಿಂತಿತು.
- ಮೂರನೇ ಎಸೆತ (19.3): ಕ್ರೀಸ್‌ನಲ್ಲಿ ಅಪಾಯಕಾರಿಯಾಗಿದ್ದ ಡೊನೊವನ್ ಫೆರೇರಾ (22 ರನ್) ಶಾನಕ ಅವರ ಅದ್ಭುತ ಸ್ಲೋವರ್ ಬಾಲ್‌ಗೆ ಕ್ಲೀನ್ ಬೌಲ್ಡ್ ಆದರು.
- ನಾಲ್ಕನೇ ಎಸೆತ (19.4): ಹೊಸ ಬ್ಯಾಟರ್ ಕ್ಯಾಲ್ವಿನ್ ಸ್ಯಾವೇಜ್ ಲಾಂಗ್-ಆನ್‌ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಶಿಮ್ರಾನ್ ಹೆಟ್ಮೆಯರ್ ಕೈಗೆ ಕ್ಯಾಚಿತ್ತರು.
- ಐದನೇ ಎಸೆತ (19.5): ಆಡಮ್ ಮಿಲ್ನೆ ದೊಡ್ಡ ಶಾಟ್‌ಗೆ ಯತ್ನಿಸಿ ವಿಕೆಟ್‌ಕೀಪರ್ ಟಿಮ್ ಸೀಫರ್ಟ್‌ಗೆ ಕ್ಯಾಚ್ ನೀಡಿದರು. ಈ ಮೂಲಕ ಶಾನಕ ಹ್ಯಾಟ್ರಿಕ್ ವಿಕೆಟ್ ಪಡೆದರು.
- ಆರನೇ ಎಸೆತ (19.6) : ಅಂತಿಮ ಎಸೆತದಲ್ಲಿ ಅಂಶಿ ಡಿ ಸಿಲ್ವಾ ಕೂಡ ದೊಡ್ಡ ಹೊಡೆತಕ್ಕೆ ಕೈಹಾಕಿ ಹೆಟ್ಮೆಯರ್ ಹಿಡಿದ ಮತ್ತೊಂದು ಅದ್ಭುತ ಕ್ಯಾಚ್‌ಗೆ ಬಲಿಯಾದರು.
DASUN SHANAKA BRINGS THIS ONE HOME FOR THE ORCAS 🐋
The Texas Super Kings went into the last over needing just 15 runs, but Shanaka held them off and got the first double hat-trick in Cognizant Major League Cricket history 🎩 pic.twitter.com/vN3mkIAmwJ
— Cognizant Major League Cricket (@MLCricket) July 6, 2026
ದಸುನ್ ಶಾನಕ ಅವರ ಈ ಮಾರಕ ಡೆತ್-ಓವರ್ ಸ್ಪೆಲ್‌ನಿಂದಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 112 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಿಯಾಟಲ್ ಓರ್ಕಾಸ್ ತಂಡವು 9 ರನ್‌ಗಳ ಸ್ಮರಣೀಯ ಜಯ ದಾಖಲಿಸಿತು.
